ವಿಜಯಪುರ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ ಕುರಿತಂತೆ ಆರೋಪಿ ದೇವಿಂದ್ರ ಸಂಗೋಗಿಯನ್ನು ಸಿಂದಗಿ ಪೊಲೀಸ್ ಠಾಣೆ ಪೊಲೀಸರು ತಡರಾತ್ರಿ ಬಂಧಿಸಿದ್ದರು. ಇಂದು ನಸುಕಿನ ಜಾವ ಶೌಚಾಲಯಕ್ಕೆ ತೆರಳಿದ್ದ ಆತ, ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾನೆ ಎಂದು ಎಸ್ಪಿ ಆನಂದ ಕುಮಾರ ತಿಳಿಸಿದರು.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಆರೋಪಿ ನೇಣು ಬಿಗಿದುಕೊಂಡಿದ್ದನ್ನು ಗಮನಿಸಿದ ನಮ್ಮ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ, ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾನೆ' ಎಂದರು.
ಇದನ್ನೂ ಓದಿ: ವಿಜಯಪುರ: ಅಪ್ರಾಪ್ತೆ ಮೇಲೆ ಅತ್ಯಾಚಾರಗೈದ ಕಾಮುಕ
'ಸಿಐಡಿ ತನಿಖೆಗೆ ಮೇಲಧಿಕಾರಿಗಳಿಗೆ ವರದಿ'
'ಇದೊಂದು ಲಾಕಪ್ ಡೆತ್ ಎನ್ನಬಹುದಾದರೂ ಪೊಲೀಸರ ಕಿರುಕುಳದಿಂದ ಆರೋಪಿ ಮೃತಪಟ್ಟಿಲ್ಲ. ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಇಂಥ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತದೆ. ಈ ಘಟನೆ ಕುರಿತು ಸಿಐಡಿ ತನಿಖೆಗೆ ವಹಿಸುವಂತೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ' ಎಂದು ಎಸ್ಪಿ ಹೇಳಿದರು.
ಮೃತನ ಪೋಷಕರು ಹಾಗೂ ಸಂಬಂಧಿಕರಿಂದ ಪೊಲೀಸ್ ಠಾಣೆ ಎದುರಿಗೆ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 'ಇಂಥ ಘಟನೆಯಿಂದ ಸಹಜವಾಗಿ ಮನೆಯವರಿಗೆ ನೋವಾಗುತ್ತದೆ. ಆದರೆ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ಮಾಡುವುದು ಸರಿಯಲ್ಲ' ಎಂದು ತಿಳಿಸಿದರು.