ಲಖನೌ: ಭಾರತೀಯ ಸೇನೆಯ ಕ್ಯಾಪ್ಟನ್ ಎಂದು ನಟಿಸಿ ಸೇನೆಯಲ್ಲಿ ನಕಲಿ ನೇಮಕಾತಿ ಮಾಡಿಸಿಕೊಡುವುದಾಗಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಯುಪಿ ಎಸ್‌ಟಿಎಫ್ ಬಂಧಿಸಿದೆ. ಆರೋಪಿಯು ಅಂಕಿತ್ ಮಿಶ್ರಾ ಅಲಿಯಾಸ್ ಆಶಿಶ್, ಸುಲ್ತಾನ್‌ಪುರ ಜಿಲ್ಲೆಯ ದೇಹತ್ ಕೊತ್ವಾಲಿ ನಿವಾಸಿ ಎಂದು ತಿಳಿದು ಬಂದಿದ್ದು, ಈತ ಸೇನೆಯ ಕ್ಯಾಪ್ಟನ್‌ನಂತೆ ನಟಿಸುವುದು ಮಾತ್ರವಲ್ಲದೇ ಯುಪಿ ಪೊಲೀಸ್‌ನಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಮೋಸ ಮಾಡುತ್ತಿದ್ದನಂತೆ.
ಯುಪಿ ಎಸ್‌ಟಿಎಫ್ ಎಸ್‌ಎಸ್‌ಪಿ ವಿಶಾಲ್ ವಿಕ್ರಮ್ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ್ದು, ಅಂಕಿತ್ ಮಿಶ್ರಾ ಎಂಬ ಆರೋಪಿ ತಾನು ಸೈನದಲ್ಲಿ ಇರುವುದಾಗಿ ಹೇಳಿದ್ದ, ಅಷ್ಟೇ ಅಲ್ಲ ನೇಮಕಾತಿ ಮಾಡಿಕೊಡುವುದಾಗಿ ಹೇಳಿಕೊಂಡು ತಿರುಗುತ್ತಿದ್ದ ಎಂಬ ಮಾಹಿತಿಯನ್ನು ಮಿಲಿಟರಿ ಗುಪ್ತಚರರಿಂದ ಪಡೆದಿದ್ದೆವು.
ನಂತರ ಆತನನ್ನು ಮಾಹಿತಿಯ ಮೇರೆಗೆ ಎಸ್‌ಟಿಎಫ್ ಬುಧವಾರ ರಾಜಧಾನಿಯ ಪಿಜಿಐ ಆಸ್ಪತ್ರೆ ಬಳಿ ಬಂಧಿಸಿದ್ದೇವೆ. ಈತನ ಬಂಧನದ ವೇಳೆ, ಆರೋಪಿಯು ಕ್ಯಾಪ್ಟನ್ ಸಮವಸ್ತ್ರದಲ್ಲಿ ಇದ್ದನು. ಅಲ್ಲದೇ ವಂಚಿಸಲು ಅಭ್ಯರ್ಥಿಗಳನ್ನು ಹುಡುಕಾಟ ನಡೆಸಿದ್ದ. ಇದಕ್ಕಾಗಿ ಆರೋಪಿ ಮಿಲಿಟರಿ ಕಚೇರಿಗಳ ಸುತ್ತ ಅಲೆದಾಡುತ್ತಿದ್ದನು ಎಂದು ತಿಳಿಸಿದ್ದಾರೆ.
ಬಂಧಿತನಿಂದ ಏನೆಲ್ಲ ವಶಕ್ಕೆ: ಆರೋಪಿಯಿಂದ ಮಿಲಿಟರಿ - ಪೊಲೀಸ್ ಸಮವಸ್ತ್ರ, ಯುವಕರ ಪ್ರಮಾಣಪತ್ರಗಳು, ಎಆರ್‌ಒ ಅಮೇಥಿಯ ಹೆಸರಿನ ಸ್ಟ್ಯಾಂಪ್ಸ್, ಎರಡು ನಕಲಿ ನೇಮಕಾತಿ ಪ್ರಮಾಣಪತ್ರಗಳ ನಕಲು ಪ್ರತಿ ಹಾಗೆ ಭರ್ತಿ ಮಾಡದೇ ಇರುವ ಸೇನೆಯಲ್ಲಿ ವೀರಯೋಧರ ಹುದ್ದೆಯ ಎರಡು ನಕಲಿ ನೇಮಕಾತಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ಆತನಿಂದ ಸ್ವಿಫ್ಟ್ ಡಿಜೈರ್ ಕಾರು, ಹಲವು ಬ್ಯಾಂಕ್ ಚೆಕ್ ಬುಕ್ಗಳು, ಪಾಸ್ಬುಕ್ ಗಳು, ಮೊಬೈಲ್ ಫೋನ್ಗಳು, ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳು ಹಾಗೂ ನಗದು ಸಮೇತ ಎಸ್ ಟಿಎಫ್ ವಶಪಡಿಸಿಕೊಂಡಿದೆ.
ಆರೋಪಿ ಹೇಗೆಲ್ಲ ವಂಚಿಸುತ್ತಿದ್ದ; ಆರೋಪಿ ಅಂಕಿತ್ ಮಿಶ್ರಾ ಸಮವಸ್ತ್ರ ಧರಿಸಿ ಸೇನಾ ನೇಮಕಾತಿ ಕಚೇರಿಗಳ ಹೊರಗೆ ತಿರುಗಾಡುತ್ತಿದ್ದ. ಈ ಸಂದರ್ಭದಲ್ಲಿ ಉದ್ಯೋಗವಿಲ್ಲದೇ ಅಲೆದಾಡುವ ನಿರುದ್ಯೋಗಿಗಳನ್ನು ಪತ್ತೆ ಮಾಡುತ್ತಿದ್ದ. ಹೀಗೆ ನೌಕರಿಗಾಗಿ ಅಲೆದಾಡುತ್ತಿದ್ದವರನ್ನು ಹುಡುಕಿ, ಭಾರತದ ವಿವಿಧ ಹುದ್ದೆಗಳಲ್ಲಿ ಕೆಲಸ ಕೊಡಿಸುವ ಹೆಸರಿನಲ್ಲಿ ಭಾರಿ ಮೊತ್ತದ ಹಣ ಪಡೆದು ವಂಚಿಸುತ್ತಿದ್ದ.
ನಾಯಕ್ ಹುದ್ದೆಗೆ ಸೇರ್ಪಡೆ ಮಾಡಿಕೊಳ್ಳುವ ಹೆಸರಿನಲ್ಲಿ ಸಂತ ಕಬೀರ್ ನಗರ ನಿವಾಸಿ ಬಲಿರಾಮ್ ಮತ್ತು ಈಟ್ ನಗರ ನಿವಾಸಿ ರಾಹುಲ್ ಎಂಬುವವರಿಂದ ತಲಾ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಈ ಪೈಕಿ 4 ಲಕ್ಷ 40 ಸಾವಿರ ರೂ. ಹಣವನ್ನು ತೆಗೆದುಕೊಂಡಿದ್ದ ಎನ್ನಲಾಗಿದೆ.
ಇದೇ ರೀತಿ ಹಲವಾರು ಜನಕ್ಕೆ ವಂಚಿಸಿದ್ದಲ್ಲದೇ ನೀವು ಹಣ ಬೇಗ ಕೊಟ್ಟಷ್ಟು ನಿಮಗೆ ಕೆಲಸ ದೊರೆಯುತ್ತದೆ. ಇದರ ಸಲುವಾಗಿ ಶೀಘ್ರದಲ್ಲೇ ನಿಮ್ಮ ಸೇರ್ಪಡೆ ಪತ್ರ ಅಂಚೆ ಮೂಲಕ ಮನೆಗೆ ತಲುಪುತ್ತದೆ ಎಂದು ವಿಶ್ವಾಸಗಳಿಸಲು ಸಮವಸ್ತ್ರ ಧರಿಸಿ ಅಮಾಯಕರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಎಂದು ವಿಚಾರಣೆ ವೇಳೆಗೆ ಹೊರ ಬಂದಿದೆ ಎಂದು ಅಧಿಕಾರಿ ವಿಶಾಲ್ ವಿಕ್ರಮ್ ತಿಳಿಸಿದ್ದಾರೆ.
ಇದನ್ನೂ ಓದಿ: ಜಾಮೀನು ಅರ್ಜಿ ಹಿಂಪಡೆದ ಕೊಲೆ ಆರೋಪಿ ಅಫ್ತಾಬ್ ಪೂನಾವಾಲಾ