ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದ ಗ್ರೆಟಾ ಥನ್‌ಬರ್ಗ್ 'ಟೂಲ್‌ಕಿಟ್' ಪ್ರಕರಣದಲ್ಲಿ ಪರಿಸರ ಕಾರ್ಯಕರ್ತ ಶುಭಂ ಕರ್ ಚೌಧರಿಗೆ ದೆಹಲಿ ನ್ಯಾಯಾಲಯವು ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ಪ್ರಕರಣ ಸಂಬಂಧ ನೊಟೀಸ್ ಬಂದ ಹಿನ್ನೆಲೆ ಶುಭಂ ಕರ್ ಚೌಧರಿ ಬಂಧನ ಪೂರ್ವ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿರುವ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ, ಮಾರ್ಚ್ 15ರವರೆಗೆ ಬಂಧನದ ಅವಧಿಯನ್ನು ವಿಸ್ತರಿಸಿದ್ದಾರೆ. ಮುಂದಿನ ವಿಚಾರಣೆಯ ದಿನಾಂಕದವರೆಗೆ ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದೂ ಸೂಚಿಸಲಾಗಿದೆ.
ಪ್ರಕರಣ ಹಿನ್ನೆಲೆ
ಭಾರತ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನವನ್ನು ಬೆಂಬಲಿಸುವ ಕುರಿತ ಮಾಹಿತಿಯುಳ್ಳ ಟೂಲ್‌ಕಿಟ್ ಅನ್ನು ಸ್ವೀಡನ್ನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಟೂಲ್‌ಕಿಟ್ ಸಿದ್ಧಪಡಿಸಲು ಭಾರತದ ಪರಿಸರ ಕಾರ್ಯಕರ್ತೆ ದಿಶಾ ರವಿ ಜೊತೆ ಶಾಂತನು ಮುಲುಕ್ ಮತ್ತು ವಕೀಲೆ ನಿಕಿತಾ ಜಾಕೋಬ್ ಎಂಬವರು ಸಹಾಯ ಮಾಡಿದ್ದರು. ಅಲ್ಲದೇ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಟೂಲ್‌ಕಿಟ್ ಆಧರಿಸಿ ಗಣರಾಜ್ಯೋತ್ಸವ ದಿನದಂದು ಖಲಿಸ್ತಾನ್ ಪ್ರತ್ಯೇಕತಾವಾದಿ ಗುಂಪುಗಳು ರೈತರೊಂದಿಗೆ ಸೇರಿಕೊಂಡು ಹಿಂಸಾಚಾರ ಎಸಗಿವೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು.
ಇದನ್ನೂ ಓದಿ: ಮಮತಾ ಮೇಲೆ ಹಲ್ಲೆ ಆರೋಪ: ಉನ್ನತ ಮಟ್ಟದ ತನಿಖೆಗೆ ಟಿಎಂಸಿ ಆಗ್ರಹ
ಹೀಗಾಗಿ ದಿಶಾ ರವಿ, ನಿಕಿತಾ ಹಾಗೂ ಶಾಂತನು ವಿರುದ್ಧ ಟೂಲ್‌ಕಿಟ್ ಹಂಚಿಕೆ ಹಾಗೂ ದೇಶದ್ರೋಹದ ಆರೋಪ ಮಾಡಲಾಗಿತ್ತು. ಪ್ರಕರಣ ಸಂಬಂಧ ದಿಶಾ ರವಿ ಬಂಧನಕ್ಕೊಳಗಾಗಿ, ಜಾಮೀನಿನ ಮೇಲೆ ಹೊರ ಬಂದಿದ್ದರು. ಈ ಮೂವರ ಜೊತೆ ಶುಭಂ ಕರ್ ಚೌಧರಿ ಹೆಸರೂ ಕೇಳಿಬಂದಿದೆ. ನಿಕಿತಾ ಹಾಗೂ ಶಾಂತನುವಿಗೆ ಕೂಡ ಮಾರ್ಚ್ 15ರವರೆಗೆ ಬಂಧನದಿಂದ ವಿನಾಯಿತಿ ನೀಡಿ ಕೋರ್ಟ್ ಆದೇಶ ನೀಡಿತ್ತು. ಇದೀಗ ಶುಭಂಗೆ ಕೂಡ ಮಧ್ಯಂತರ ರಕ್ಷಣೆ ನೀಡಿದೆ.