ಬೆಂಗಳೂರು: ಯಶವಂತಪುರ ಪೊಲೀಸರು ಕಾರ್ಯಾಚರಣೆ ನಡೆಸಿ ನಗರದಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 19.5 ಲಕ್ಷ ರೂ ಮೌಲ್ಯದ 369 ಗ್ರಾಂ ಚಿನ್ನಾಭರಣ, 529 ಗ್ರಾಂ ಬೆಳ್ಳಿ ಆಭರಣ ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಇಬ್ಬರನ್ನು ವಿಚಾರಣೆ ಮಾಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಆಗಸ್ಟ್ 10 ರಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮನೆ ಕಳವು ಪ್ರಕರಣದ ಸಂಬಂಧ ಕದ್ದ ಚಿನ್ನಾಭರಣ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎರಡು ಜೀವ ಒಂದೇ ಪ್ರಾಣ: ಕರಾಟೆ ಸೀನಾ, ಕೊಕ್ಕರೆ ಸತೀಶ ಬಂಧಿತರು. ಇವರಿಬ್ಬರೂ ಎರಡು ಜೀವ ಒಂದೇ ಪ್ರಾಣ ಎನ್ನುವಂತಿದ್ದ ಕುಚಿಕು ಗೆಳೆಯರು. ಕಳ್ಳತನ ಮಾಡುವುದರಲ್ಲಿ ಇವರಿಬ್ಬರದ್ದು ಅನ್ಯೋನ್ಯ ಸ್ನೇಹ ಸಂಬಂಧ. ಎಲ್ಲೇ ಕಳ್ಳತನ ಆಗಲಿ, ಯಾವುದೇ ಕೆಲಸ ಮಾಡಲಿ ಎಲ್ಲಿಗೆ ಹೋದರೂ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟು ಹೋಗುತ್ತಿರಲ್ಲಿಲ್ಲ, ಜೈಲಿನಿಂದ ಒಬ್ಬ ಹೊರ ಬಂದರೂ ಇನ್ನೊಬ್ಬ ಕಳ್ಳತನ ಮಾಡುತ್ತಿರಲಿಲ್ಲ, ಇಬ್ಬರೂ ಹೊರ ಬಂದ ಮೇಲೆ ಮಾತ್ರ ಸ್ಕೆಚ್ ಹಾಕಿ ಕಳ್ಳತನ ಮಾಡುತ್ತಿದ್ದರು.
ಚಿನ್ನಾಭರಣ ಮಾರಾಟ ಮಾಡುವಾಗ ಸಿಕ್ಕಿ ಬಿದ್ದ ಖತರ್ನಾಕ್: ಕರಾಟೆ ಸೀನಾ, ಕೊಕ್ಕರೆ ಸತೀಶ ಯಾವುದೇ ಕಳ್ಳತನವಾದರೂ ಒಟ್ಟಿಗೆ ಮಾಡುವಷ್ಟು ಅಪ್ತರು. 2007ರಿಂದಲೂ ಇವರು ನಗರದ ವಿವಿಧೆಡೆ ಕಳ್ಳತನ ಮಾಡಿದ್ದಾರೆ. ಮನೆಗಳ್ಳತನ ಮಾಡೋದರಲ್ಲಿ ಎತ್ತಿದ ಕೈ ಎನ್ನುವಂತಿರುವ ಇಬ್ಬರು ಅದೆಷ್ಟೋ ಬಾರಿ ಜೈಲಿಗೂ ಒಟ್ಟಿಗೆ ಹೋಗಿಬಂದಿದ್ದಾರೆ. ಯಶವಂತಪುರದ ಎಲ್.ಐ.ಸಿ ಗಾರ್ಡನ್ನಲ್ಲಿ ಮುರಳಿ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ. ಮನೆಯ ಕೀಯನ್ನು ಕಿಟಕಿ ಪಕ್ಕ ಇಟ್ಟು ಹೋಗಿರುವುದನ್ನು ಗಮನಿಸಿ ಮನೆಯಲ್ಲಿದ್ದ ಚಿನ್ನಾಭರಣ ನಗದು ದೋಚಿ ಎಸ್ಕೇಪ್ ಆಗಿದ್ದರು.
ಕರಾಟೆ ಸೀನಾ ಮತ್ತು ಕೊಕ್ಕರೆ ಸತೀಶ ಅನಾಥರು: ಖದೀಮರು ಅನಾಥರು. ಇವರಿಬ್ಬರು ಪರಿಚಯವಾದ ಬಳಿಕ ಒಂದಾಗಿ ಕಳ್ಳತನ ಮಾಡತೊಡಗಿದರು. ಕೊಕ್ಕರೆ ಸತೀಶನ ಮೇಲೆ 32 ಮತ್ತು ಕರಾಟೆ ಸೀನಾನ ಮೇಲೆ 29 ಮನೆಗಳ್ಳತನ ಪ್ರಕರಣಗಳಿವೆ. ಈ ಕಿಲಾಡಿ ಜೋಡಿಗಳು ನಗರದ ಲಾಡ್ಜ್ಗಳನ್ನು ಬುಕ್ ಮಾಡಿ ಅಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಅಲ್ಲೇ ಬಿಂದಾಸ್ ಲೈಫ್ ಭಾಗವಾಗಿ ಹೆಣ್ಣು, ಎಣ್ಣೆ ಅಂತ ಎಂಜಾಯ್ ಮಾಡುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ಮನೆಗಳ್ಳತನ ಮಾಡುತ್ತಿದ್ದರು. ಸದ್ಯ ಬಂಧಿತರಿಂದ 370 ಗ್ರಾಂ ಚಿನ್ನ 500 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.