ಹೈದರಾಬಾದ್ (ತೆಲಂಗಾಣ): ಬಿತ್ತನೆ ಫಲ ನೀಡುತ್ತದೆಯೋ ಇಲ್ಲವೆಂಬ ಆತಂಕದಲ್ಲಿರುವ ಅನ್ನದಾತರು ಯಾವಾಗಲೂ ಗೊಬ್ಬರ, ಬೀಜಗಳ ಗುಣಮಟ್ಟದ ಬಗ್ಗೆ ಚಿಂತಿಸುತ್ತಿರುತ್ತಾರೆ. ಆದರೆ ರೈತರಿಗೆ ಮೋಸ ಮಾಡಿ ಹಣ ಗಳಿಸಲು ಮಾರುಕಟ್ಟೆಯಲ್ಲಿ ವಂಚಕರು ಕಾದು ಕುಳಿತಿರುತ್ತಾರೆ. ಇದಕ್ಕೆ ಉದಾಹರಣಯೆಂಬಂತೆ ತೆಲಂಗಾಣದಲ್ಲಿ ಅಪಾರ ಪ್ರಮಾಣದ ನಕಲಿ ಬೀಜ-ರಸಗೊಬ್ಬರವನ್ನು ಪತ್ತೆ ಮಾಡಲಾಗಿದೆ.
ರಾಜ್ಯಾದ್ಯಂತ ಹಲವಾರು ಪ್ರದೇಶಗಳಲ್ಲಿ ದಾಳಿ ನಡೆಸಿದ ವಿಜಿಲೆನ್ಸ್ ಮತ್ತು ಜಾರಿ ಇಲಾಖೆಯು 229 ಕ್ವಿಂಟಾಲ್ ನಕಲಿ ಬೀಜಗಳು, 74.3 ಮೆಟ್ರಿಕ್ ಟನ್ ನಕಲಿ ರಸಗೊಬ್ಬರ ಹಾಗೂ 268 ಕೆಜಿ ನಕಲಿ ಕೀಟನಾಶಕವನ್ನು ವಶಪಡಿಸಿಕೊಂಡಿದೆ. ಇವುಗಳ ಮೌಲ್ಯ 58 ಲಕ್ಷ ರೂ. ಅಗಿದೆ.
ಹೆಚ್ಚಿನ ಓದಿಗೆ: ವಿಶೇಷ ಅಂಕಣ: ನಕಲಿ ಬಿತ್ತನೆ ಬೀಜ ದಂಧೆಗೆ ಹಾಕಬೇಕಿದೆ ಕಡಿವಾಣ..!
ನಕಲಿ ಬೀಜಗಳ ಪೂರೈಕೆ ಮತ್ತು ಮಾರಾಟವನ್ನು ತಡೆಯುವ ಸಲುವಾಗಿ ಜೂನ್ 11ರಿಂದ ಇಲಾಖೆಯು ದಾಳಿಗಳನ್ನು ನಡೆಸಲು ಪ್ರಾರಂಭಿಸಿದ್ದು, ಕಾರ್ಯಾಚರಣೆ ಮುಂದುವರೆಸಿದೆ. ವಶಪಡಿಸಿಕೊಂಡ ನಕಲಿ ಬೀಜಗಳಲ್ಲಿ ಬಿಟಿ ಹತ್ತಿ, ಸೋಯಾಬೀನ್ ಮತ್ತು ಇತರ ಬೀಜಗಳು ಸೇರಿವೆ. ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಬೀಜ ಮಳಿಗೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.