ಬಿಕಾನೆರ್(ರಾಜಸ್ಥಾನ) : ಅಲೆಮಾರಿ ಜನಾಂಗದ 55 ವರ್ಷದ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮಹಾರಾಷ್ಟ್ರ ಮೂಲದ ಸಂಗೀತಾ ಎಂದು ಗುರುತಿಸಲಾಗಿದೆ. ಈಕೆ ಕಳೆದ ಎರಡು ತಿಂಗಳಿನಿಂದ ಬಿಕಾನೆರ್ ಜಿಲ್ಲೆಯ ಅಜ್ಮೀರ್ ಪಟ್ಟಣದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿದ್ದರು.
ನಿನ್ನೆ ರಾತ್ರಿ ಇಲ್ಲಿನ ದೇವಾಲಯಕ್ಕೆಂದು ಮಹಿಳೆ ತೆರಳಿದ್ದು, ಈ ವೇಳೆ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ. ಬೆಳಗ್ಗೆ ದೇಗುಲದ ಬಳಿ ರಕ್ತಸಿಕ್ತ ಮೃತದೇಹವನ್ನು ಕಂಡ ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಾಗಮಂಗಲದಲ್ಲಿ ಕಿಡಿಗೇಡಿಗಳ ಅಟ್ಟಹಾಸ: ಅರ್ಚಕನ ಮೇಲೆ ಮಾರಣಾಂತಿಕ ಹಲ್ಲೆ
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಕೆಲ ದಿನಗಳಿಂದ ಅಜ್ಮೀರ್ನ ಅಂಗಡಿಯೊಂದರಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದಳು. ರಾತ್ರಿ ವೇಳೆ ಅವರಿವರ ಮನೆಯ ಮುಂದೆ ಮಲಗುತ್ತಿದ್ದಳು ಎಂದು ತಿಳಿದು ಬಂದಿದೆ. ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.