ಕಾನ್ಪುರ (ಉತ್ತರ ಪ್ರದೇಶ): ಆರು ತಿಂಗಳ ಹಿಂದೆ ಭಿಕ್ಷಾಟನೆ ಮಾಫಿಯಾವೊಂದು ಓರ್ವ ದಿನಗೂಲಿ ಕಾರ್ಮಿಕನನ್ನು ಅಪಹರಿಸಿ, ರಾಸಾಯನಿಕ ಚುಚ್ಚುಮದ್ದು ನೀಡಿ ಕುರುಡನನ್ನಾಗಿಸಿದೆ. ಅಷ್ಟೇ ಅಲ್ಲ, ಕೈ ಕಾಲುಗಳ ಬೆರಳುಗಳನ್ನೂ ಕತ್ತರಿಸಿದೆ. ಈ ಮೂಲಕ ಭಿಕ್ಷುಕನನ್ನಾಗಿ ಮಾಡಲು ಪ್ರಯತ್ನಿಸಿದ್ದಾರೆ. ಇಂಥದ್ದೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು ಉತ್ತರ ಪ್ರದೇಶದ ಕಾನ್ಪುರದಲ್ಲಿ.
ಭಿಕ್ಷಾಟನೆ ಮಾಫಿಯಾ ಗ್ಯಾಂಗ್‌ನಿಂದ ಪ್ರಾಣ ಉಳಿಸಿಕೊಂಡು ಬಂದಿರುವ ಸುರೇಶ್ ಮಾಂಝಿ ಎಂಬ ದಿನಗೂಲಿ ಕಾರ್ಮಿಕ ತನ್ನ ಮೇಲೆ ಎಸಗಿದ ಘನಘೋರ ಕಥೆಯನ್ನು ಪೊಲೀಸರಿಗೆ ವಿವರಿಸಿದ್ದಾನೆ.
ಈತನನ್ನು ಕೆಲವು ತಿಂಗಳ ಹಿಂದೆ 70,000 ರೂಪಾಯಿಗೆ ದೆಹಲಿಯ ಮಹಿಳೆಯೊಬ್ಬರಿಗೆ ಭಿಕ್ಷಾಟನೆ ಮಾಫಿಯಾ ಮಾರಾಟ ಮಾಡಿದೆ. ನಂತರ ರಾಜ್ ಎಂಬಾತ ಈತನನ್ನು ಗೋರಖ್ ಧಾಮ್ ಎಕ್ಸ್ ಪ್ರೆಸ್ ರೈಲಿನಲ್ಲಿ ದೆಹಲಿಗೆ ಕರೆಕೊಂಡು ಹೋಗಿದ್ದು, ಅಲ್ಲಿ ಭಿಕ್ಷೆ ಬೇಡಲು ಒಂದು ಸ್ಥಳದಲ್ಲಿ ಬಿಟ್ಟಿದ್ದಾನೆ.
ಅಲ್ಲಿ ಮಾಂಝಿ ಮತ್ತು ಇತರ ಭಿಕ್ಷುಕರಿಗೆ ದಿನಕ್ಕೆ ಕೇವಲ ಎರಡು ಚಪಾತಿಗಳನ್ನು ಮಾತ್ರ ನೀಡಿ ಅವರು ತೆಳ್ಳಗೆ ಕಾಣುವಂತೆಯೂ, ನೋಡಿದರೆ ಕನಿಕರ ಹುಟ್ಟುವ ರೀತಿಯಲ್ಲೂ ತಯಾರು ಮಾಡಿದ್ದಾರೆ. ಈ ಮಾಫಿಯಾ ಗ್ಯಾಂಗ್ ಪ್ರತಿದಿನ ಚಿತ್ರಹಿಂಸೆ ನೀಡುತ್ತಿದ್ದರು. ರಾಸಾಯನಿಕ ಚುಚ್ಚು ಮದ್ದನ್ನೂ ನೀಡುತ್ತಿದ್ದರು ಎಂದು ಮಾಂಝಿ ವಿವರಿಸಿದ್ದಾನೆ.
ಮಾಂಝಿಗೆ ಮಾನಸಿಕ, ದೈಹಿಕವಾಗಿ ಅಸ್ವಸ್ಥಗೊಂಡು ಭಿಕ್ಷೆ ಬೇಡಲೂ ಸಹ ಸಾಧ್ಯವಾಗದೇ ಇದಾಗ ಆತನ ಖರೀದಿದಾರರು ಮಾಂಝಿಯನ್ನು ಬದಲಾಯಿಸುವಂತೆ ಗ್ಯಾಂಗ್ಗೆ ಒತ್ತಾಯಿಸಿದ್ದಾರೆ. ನಂತರ ಈ ಗ್ಯಾಂಗ್ ಮಾಂಝಿಯನ್ನು ರೈಲಿನಲ್ಲಿ ಕಾನ್ಪುರಕ್ಕೆ ಕರೆದುಕೊಂಡು ಹೋಗಿ ಮತ್ತೊಮ್ಮೆ ಮಾರಾಟ ಮಾಡಲು ಪ್ರಯತ್ನಿಸಿದೆ. ಈ ಪ್ರಯತ್ನ ವಿಫಲವಾದಾಗ ಆತನನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈತನ ಯಾತನೆ ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಚಿಕಿತ್ಸೆ ಪಡೆದು ತಮ್ಮ ಕುಟುಂಬ ಸೇರಿದ್ದಾನೆ.
ಈ ಬಗ್ಗೆ ಕಾನ್ಪುರದ ಪೊಲೀಸ್ ಕಮಿಷನರ್ ಬಿ.ಪಿ. ಜೋಗ್ದಂದ್ ಸುದ್ದಿಗಾರರೊಂದಿಗೆ ಮಾತನಾಡಿ, "ಮಾಂಝಿ ತುಂಬಾ ಕಷ್ಟಪಟ್ಟಿದ್ದಾನೆ. ಈ ಕೃತ್ಯ ನಡೆಸಿದ ಗ್ಯಾಂಗ್ ಭೇದಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅಪರಿಚಿತ ಆರೋಪಿಗಳ ವಿರುದ್ಧ ಸಂಬಂಧಿತ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಆ್ಯಸಿಡ್ ನಾಗನಿಗೆ ಗ್ಯಾಂಗ್ರಿನ್ ಲಕ್ಷಣ: ಬರೀ ಕಾಲಲ್ಲ, ಇಡೀ ದೇಹವೇ ಕೊಳೆತು ಹೋಗಬೇಕೆಂದ ಸಂತ್ರಸ್ತೆ