ಚೆನ್ನೈ(ತಮಿಳುನಾಡು) : ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ನಾಲ್ಕು ದಿನಗಳು ಮಾತ್ರ ಬಾಕಿಯಿದೆ. ಇತ್ತ ಡಿಎಂಕೆ ನಾಯಕರಿಗೆ ಆದಾಯ ತೆರಿಗೆ ಇಲಾಖೆ (ಐಟಿ) ಶಾಕ್ ಮೇಲೆ ಶಾಕ್ ನೀಡುತ್ತಿದೆ.
ಇಂದು ಬೆಳಗ್ಗೆ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರ ಅಳಿಯ ಸಬರೀಸನ್ ಅವರ ಚೆನ್ನೈನ ನೀಲಂಕಾರೈನಲ್ಲಿರುವ ನಿವಾಸ ಹಾಗೂ ಅವರಿಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ಐಟಿ ದಾಳಿ ನಡೆಸಿತ್ತು.
ಬಳಿಕ ಅರವಕುರಿಚಿ ಕ್ಷೇತ್ರದ ಡಿಎಂಕೆ ಶಾಸಕ ಸೆಂಥಿಲ್ ಬಾಲಾಜಿ ಅವರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ರೇಡ್ ಆಗಿತ್ತು. ಇದೀಗ ಅಣ್ಣಾನಗರದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಡಿಎಂಕೆ ಅಭ್ಯರ್ಥಿ ಎಂ ಕೆ ಮೋಹನ್ ಅವರ ಮನೆ ಸೇರಿ 15 ಕಡೆ ದಾಳಿ ನಡೆಸಲಾಗಿದೆ.
ಕಳೆದ ವಾರ ತಿರುವಣ್ಣಾಮಲೈ ಕ್ಷೇತ್ರದ ಡಿಎಂಕೆಯ ಹಾಲಿ ಶಾಸಕ ಹಾಗೂ ಚುನಾವಣೆ ಅಭ್ಯರ್ಥಿ ಇ ವಿ ವೇಲು, ಸೆಂಥಿಲ್ ಬಾಲಾಜಿ ಅವರ ಬೆಂಬಲಿಗರ ಮನೆ, ಹಣಕಾಸು ಸಂಸ್ಥೆಗಳು, ಗಾರ್ಮೆಂಟ್ಸ್ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದನ್ನೂ ಓದಿ: ಎಂ.ಕೆ.ಸ್ಟಾಲಿನ್ ಅಳಿಯ ಸಬರೀಸನ್ ನಿವಾಸದ ಮೇಲೆ ಐಟಿ ದಾಳಿ
ಆದಾಯ ತೆರಿಗೆ ಇಲಾಖೆಯಿಂದ ಅಧಿಕಾರ ದುರುಪಯೋಗ ಎಂದು ಡಿಎಂಕೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಎಐಎಡಿಎಂಕೆ-ಬಿಜೆಪಿ ಗೆಲುವಿಗಾಗಿ ತೆರಿಗೆ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಡಿಎಂಕೆ ಆರೋಪಿಸಿದೆ.
ಪೆರಂಬಲೂರಿನಲ್ಲಿ ನಡೆದ ಚುನಾವಣೆ ರ್ಯಾಲಿ ವೇಳೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಟಾಲಿನ್, ಚೆನ್ನೈನ ನನ್ನ ಮಗಳ ಮನೆ ಮೇಲೆ ದಾಳಿ ನಡೆಯುತ್ತಿದೆ ಎಂಬ ಸುದ್ದಿ ನನಗೆ ಸಿಕ್ಕಿತು. ಪ್ರಧಾನಿ ಮೋದಿ ಸರ್ಕಾರ ಈಗ ಎಐಎಡಿಎಂಕೆ ಸರ್ಕಾರವನ್ನು ಉಳಿಸುತ್ತಿದೆ. ನಾನು ಕರುಣಾನಿಧಿಯ ಪುತ್ರ, ಈ ಐಟಿ ದಾಳಿಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.