ಹುಬ್ಬಳ್ಳಿ: ರಾಜಸ್ಥಾನದ ಅಜ್ಮೇರ್ ಹಾಗೂ ಬಿಲವಾಡ ಮೂಲದ ಮೂರು ಜನ ನಟೋರಿಯಸ್ ದರೋಡೆಕೋರರನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಬರೋಬ್ಬರಿ 7.5 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಲೈಟ್ ಬಲೂನ್ ಮಾರಾಟದ ಸೋಗಿನಲ್ಲಿ ರೈಲಿನ ಮೂಲಕ ರಾಜ್ಯಕ್ಕೆ ಆಗಮಿಸಿದ್ದ ನಟೋರಿಯಸ್ ದರೋಡೆಕೋರರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಇತರೆ ನಗರಗಳಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ದರೋಡೆ ಮಾಡುತ್ತಿದ್ದರು.
ಹುಬ್ಬಳ್ಳಿಯ ಕೇಶ್ವಾಪುರ ಮತ್ತು ಗೋಕುಲ್ ರಸ್ತೆಯ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಬೆಳಗಾವಿ ಜಿಲ್ಲೆಯ ಟಿಳಕವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಒಂದು ವಾರದಿಂದ ರಾಜಸ್ಥಾನಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ್ದ ಕೇಶ್ವಾಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ ನೇತೃತ್ವದ ತಂಡ ಮೂವರು ದರೋಡೆಕೋರರನ್ನು ಬಂಧಿಸಿ, ಅವರಿಂದ 171 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದೆ.