ಹೈದ್ರಾಬಾದ್: ಇಲ್ಲಿನ ರಂಗಾರೆಡ್ಡಿ ಜಿಲ್ಲೆಯ ಮನ್ನೆಗುಡದಲ್ಲಿ ಡೆಂಟಲ್ ವಿದ್ಯಾರ್ಥಿಯನ್ನು ಆರೋಪಿ ಕೊದುದುಲ ನವೀನ್ ರೆಡ್ಡಿ ಅಪಹರಿಸಿದ್ದ ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೇ ತಿಂಗಳ 9ರಂದು ಈತ ಯುವತಿಯನ್ನು ಅಪಹರಿಸಿ, ನಲಗೊಂಡದಲ್ಲಿ ಬಿಟ್ಟು ಗೋವಾಕ್ಕೆ ತೆರಳಿದ್ದ. ಅಲ್ಲಿನ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ನವೀನ್ ರೆಡ್ಡಿ, ಕಿಡ್ನಾಪ್ ಮಾಡಲು ಕಾರಣ ಕುರಿತ ವಿಡಿಯೋವನ್ನು ಅಲ್ಲಿನ ರೂಮ್ ಬಾಯ್ ಸಹಾಯದಿಂದ ಚಿತ್ರೀಕರಿಸಿದ್ದಾನೆ. ಈ ವಿಡಿಯೋ ಹೊಂದಿರುವ ಪೆನ್ ಡ್ರೈವ್ ಹೈದ್ರಾಬಾದ್ಗೆ ಕಳುಹಿಸಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುವತಿ ಹಾಗೂ ಆತನ ಸಂಬಂಧ ಕುರಿತು ಸರಿ ಸುಮಾರು 58 ನಿಮಿಷದ ವಿಡಿಯೋದಲ್ಲಿ ವಿವರಣೆ ನೀಡಿದ್ದಾನೆ.
ದೀರ್ಘಕಾಲದಿಂದ ನಾವಿಬ್ಬರು ಒಟ್ಟಿಗೆ ಪ್ರಯಾಣಿಸುತ್ತಿದ್ದೇವೆ. ಆದರೆ, ಯುವತಿಯ ಪೋಷಕರು ನಮ್ಮನ್ನು ದೂರ ಇರಿಸಿದ್ದಾರೆ. ನಾನು ಸಂಪಾದಿಸಿದ ಹಣದಿಂದ ಆಕೆ ದುಬಾರಿ ಬಟ್ಟೆ ಮತ್ತು ಬ್ಯೂಟಿ ಪ್ರೊಡಕ್ಟ್ ಖರೀದಿಸಿದ್ದಾರೆ. ಯುವತಿಯ ಚಿಕ್ಕಪ್ಪ ಮತ್ತು ತಾಯಿ ನಮ್ಮನ್ನು ದೂರ ಇರಿಸಬೇಕು ಎಂದು ಸಂಚು ರೂಪಿಸಿದ್ದಾರೆ. ಕಳೆದ 5-6 ತಿಂಗಳಿನಿಂದ ನಾನು ಆಕೆಯನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಒಂದು ವೇಳೆ ನಾನು ಆಕೆ ಮನೆ ಅಥವಾ ಕಾಲೇಜಿಗೆ ಹೋಗಿ ಮಾತನಾಡಲು ಪ್ರಯತ್ನಿಸಿದರೆ, ಪೊಲೀಸ್ ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆ ಹಾಕಿದ್ದಾರೆ. ಕೆಲವು ದಿನಗಳ ಹಿಂದೆ ಆಕೆಗೆ ಎನ್ಆರ್ಐ ಜೊತೆ ಮದುವೆ ನಿಶ್ಚಯವಾಗಿರುವ ವಿಷಯ ತಿಳಿಯಿತು. ಇದೇ ತಿಂಗಳ 9ರಂದು ಆಕೆಯ ನಿಶ್ಚಿತಾರ್ಥ ಇದೆ ಎಂಬುದು ನನಗೆ 8ನೇ ತಾರೀಖಿನಂದು ತಿಳಿಯಿತು. ಇದನ್ನು ನಿಲ್ಲಿಸಿ, ಆಕೆಯೊಂದಿಗೆ ಮಾತನಾಡಬೇಕು ಎಂದು ನಿರ್ಧರಿಸಿದೆ.
ವಿಡಿಯೋ ಮಾಡಿದ ಉದ್ದೇಶ ಬಹಿರಂಗ: ಟೀ ಶಾಪ್ನಲ್ಲಿ ಕೆಲಸ ಮಾಡುತ್ತಿರುವ 20 ಜನರ ಸಹಾಯದಿಂದ ನಾನು ಆಕೆಯನ್ನು ಭೇಟಿಯಾದೆ. ಕಾರಿನಲ್ಲಿ ಕುಳಿತು ಮಾತನಾಡುವಂತೆ ಆಕೆಗೆ ಬಲವಂತ ಪಡಿಸಿದೆ. ಕಾರಿನಿಂದ ಎರಡು ಬಾರಿ ಇಳಿಯಲು ಮುಂದಾದ ಆಕೆಯನ್ನು ಎರಡು ಬಾರಿ ತಡೆದೆ. ಆಕೆಯನ್ನು ಹೊಡೆಯಲಿಲ್ಲ. ಆಕೆ ಮುಖ ತಳ್ಳಿದಾಗ ಉಗುರು ತಾಕಿತು. ಕಿಡ್ನಾಪ್ ಆದ ಬಳಿಕ ಆಕೆಯನ್ನು ಮನೆಯ ಬಳಿ ಬಿಟ್ಟು ಬಿಡಲು ನಿರ್ಧರಿಸಿದೆ. ಆಕೆ ಪೊಲೀಸರ ಮೊರೆ ಹೋದರೆ ಕಷ್ಟ ಎಂದು ಲಾಯರ್ ಅವರ ಸಲಹೆಯನ್ನು ಪಡೆಯಲು ಹೋದೆ. ಆದರೆ ಅವರು ಸರಿಯಾದ ಸಮಯಕ್ಕೆ ಸ್ಪಂದಿಸದ ಹಿನ್ನೆಲೆ ನಡು ರಸ್ತೆಯಲ್ಲೇ ಬಿಟ್ಟು ಹೋದೆ. ನಮ್ಮಿಬ್ಬರ ನಡುವೆ ಏನಾಗಿದೆ ಎಂಬುದನ್ನು ಹೊರ ಜಗತ್ತಿಗೆ ತಿಳಿಸುವ ಉದ್ಧೇಶದಿಂದ ಈ ವಿಡಿಯೋ ಮಾಡಿರುವುದಾಗಿ ಯುವಕ ತಿಳಿಸಿದ್ದಾರೆ.
ಈ ಪ್ರಕರಣ ಸಂಬಂದ ಆದಿಬಟ್ಲಾ ಪೊಲೀಸ್ರು ಅರ್ಜಿ ಸಲ್ಲಿಸಿದ್ದು, ಅಪಹರಣ ಪ್ರಕರಣದಲ್ಲಿ ನವೀನ್ ರೆಡ್ಡಿಯನ್ನು 8 ದಿನ ಮತ್ತು ಎ5 ಆರೋಪಿ ಚಂದುವನ್ನು 5 ದಿನ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣ ಸಂಬಂಧ ಟ್ರಯಲ್ ಕೋರ್ಟ್ ಶುಕ್ತವಾರ ನಿರ್ಧಾರ ಪ್ರಕಟಿಸಲಿದೆ. ಈ ಪ್ರಕರಣ ಸಂಬಂಧ ಡಿ. 10ರಂದು ಐದು ಜನರನ್ನು ಬಂಧಿಸಲಾಗಿದ್ದು, ಎರಡು ದಿನ ವಿಚಾರಣೆ ನಡೆಸಲಾಗಿದೆ.
ನಾವು ಕೇವಲ ಸ್ನೇಹಿತರು:
ಪ್ರಕರಣ ಕುರಿತು ಮಾತನಾಡಿರುವ ಯುವತಿ, ನವೀನ್ ಹೇಳಿದಂತೆ ನಾವಿಬ್ಬರು ಸ್ನೇಹಿತರಾಗಿದ್ದೇವು ಎಂದಿದ್ದಾರೆ. ಆದರೆ, ನವೀನ್ ವಿಡಿಯೋದಲ್ಲಿ ಮಾತನಾಡಿರುವುದು ಸುಳ್ಳು. ಇದರ ಹಿಂದೆ ಪಿತೂರಿ ಇದೆ. ನಾನು ಒಬ್ಬಳೆ ಆತನೊಂದಿಗೆ ಹೋಗಿರಲಿಲ್ಲ. ನವೀನ್ ಹೇಳುತ್ತಿರುವುದೆಲ್ಲಾ ಸುಳ್ಳು. ಪೊಲೀಸ್ ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದರು.
ಇದನ್ನೂ ಓದಿ: ಪೊಲೀಸರಿಂದ ರಕ್ಷಿಸಲ್ಪಟ್ಟಿದ್ದ ಮಹಿಳೆ ನೇಣಿಗೆ ಶರಣು!