ನವದೆಹಲಿ: ಕ್ರಿಪ್ಟೊ ಕರೆನ್ಸಿ ಹಗರಣ ಬಯಲಿಗೆಳೆದಿರುವ ಸೈಬರ್ ಭದ್ರತಾ ಸಂಶೋಧಕರು, 1.4 ಮಿಲಿಯನ್ ಡಾಲರ್‌ಗಳ ವಹಿವಾಟಿನ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಬಂಬಲ್ ಮತ್ತು ಟಿಂಡರ್ ನಂತಹ ಜನಪ್ರಿಯ ಡೇಟಿಂಗ್ ಆ್ಯಪ್‌ಗಳ ಮೂಲಕ ಐಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಬಳಕೆದಾರರ ಮಾಹಿತಿ ಸಂಗ್ರಹಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸೈಬರ್ ಕ್ರಿಮಿನಲ್‌ಗಳು ಯುಎಸ್ ಹಾಗೂ ಯುರೋಪ್ ನಂತರ ಇದೀಗ ಏಷ್ಯಾದ ಜನರನ್ನು ಗುರಿಯಾಗಿಸಿಕೊಂಡು ಕೃತ್ಯಗಳನ್ನು ಮಾಡುತ್ತಿದ್ದಾರೆ. ಸೈಬರ್ ಭದ್ರತಾ ಸಂಸ್ಥೆಯ ಸೋಫೋಸ್ ತಂಡವು ದಾಳಿಕೋರರಿಂದ ನಿಯಂತ್ರಿಸಲ್ಪಡುವ ಬಿಟ್ ಕಾಯಿನ್ ವ್ಯಾಲೆಟ್ ಅನ್ನು ಪತ್ತೆಹಚ್ಚಿದ್ದು, ಇದರಲ್ಲಿ ಸುಮಾರು 1.4 ಮಿಲಿಯನ್ ಡಾಲರ್ ಕ್ರಿಪ್ಟೋ ಕರೆನ್ಸಿಯನ್ನು ಅಮಾಯಕರಿಂದ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ.
ಸೋಫೋಸ್ ಸಂಶೋಧಕರು ಕ್ರಿಪ್ಟೋರಾಮ್ ಎಂದು ಕೋಡ್ - ಹೆಸರಿಸಿದ್ದಾರೆ, ಇದು ಪ್ರತಿಯೊಂದು ಹಂತದಲ್ಲೂ ಸಾಮಾಜಿಕ ಇಂಜಿನಿಯರಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮೊದಲಿಗೆ, ದಾಳಿಕೋರರು ಕಾನೂನುಬದ್ಧ ಡೇಟಿಂಗ್ ಸೈಟ್‌ಗಳಲ್ಲಿ ಬಳಕೆದಾರರ ಮನವೊಲಿಸುವ ನಕಲಿ ಪ್ರೊಫೈಲ್‌ಗಳನ್ನು ಪೋಸ್ಟ್ ಮಾಡುತ್ತಾರೆ. ಒಮ್ಮೆ ಬಳಕೆದಾರರ ಸಂಪರ್ಕ ಸಾಧಿಸಿದ ನಂತರ, ಮೆಸೇಜ್ ಮೂಲಕ ಸಂಭಾಷಣೆಯನ್ನು ಮುಂದುವರಿಸುತ್ತಾರೆ.
ನಂತರ ನಕಲಿ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಹೇಳಿ ಅದರಲ್ಲಿ ಹೂಡಿಕೆ ಮಾಡಲು ಮನವೊಲಿಸಲು ಪ್ರಯತ್ನ ಮಾಡುತ್ತಾರೆ ಎಂದು ಸೋಫೋಸ್‌ನ ಹಿರಿಯ ಸಂಶೋಧಕ ಜಗದೀಶ್ ಚಂದ್ರಯ್ಯ ತಿಳಿಸಿದ್ದಾರೆ.
ದಾಳಿಕೋರರು ಇಂತಹ ಹಗರಣಗಳಿಂದ ಲಕ್ಷಾಂತರ ಡಾಲರ್‌ಗಳನ್ನು ಸಂಪಾದಿಸುತ್ತಿದ್ದಾರೆ. ಹಣಗಳಿಕೆ ಜೊತೆಗೆ, ಸೈಬರ್ ದಾಳಿಕೋರರು ಐಫೋನ್ ಬಳಕೆದಾರರ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಸೈಬರ್ ಅಪರಾಧಿಗಳು ಎಂಟರ್‌ಪ್ರೈಸ್ ಸಿಗ್ನೇಚರ್ ಅನ್ನು ಬಳಸುತ್ತಾರೆ.
ಎಂಟರ್‌ಪ್ರೈಸ್ ಸಿಗ್ನೇಚರ್ ವ್ಯವಸ್ಥೆಯ ಕಾರ್ಯನಿರ್ವಹಣೆಯೊಂದಿಗೆ ತಮ್ಮ ನಕಲಿ ಕ್ರಿಪ್ಟೋ - ಟ್ರೇಡಿಂಗ್ ಅಪ್ಲಿಕೇಶನ್‌ಗಳೊಂದಿಗೆ ಐಫೋನ್ ಬಳಕೆದಾರರ ದೊಡ್ಡ ಗುಂಪುಗಳನ್ನು ಗುರಿಯಾಗಿಸಬಹುದು. ಅವರ ಸಾಧನಗಳ ಮೇಲೆ ರಿಮೋಟ್ ಮ್ಯಾನೇಜ್‌ಮೆಂಟ್ ನಿಯಂತ್ರಣವನ್ನು ಪಡೆಯಬಹುದು ಎಂದು ವರದಿ ಹೇಳಿದೆ. ಕ್ರಿಪ್ಟೋಕರೆನ್ಸಿ ಹೂಡಿಕೆಯಿಂದ ಹಣ ದೋಚುವುದಕ್ಕಿಂತ ವೈಯಕ್ತಿಕ ಮಾಹಿತಿ ಸಂಗ್ರಹಿಸಬಹುದು ಎನ್ನಲಾಗಿದೆ.