ಕೋಲ್ಕತ್ತಾ(ಪಶ್ಚಿಮ ಬಂಗಾಳ): 2018 ರಲ್ಲಿ ನಡೆದಿದ್ದ ಭದ್ರತಾ ಸಿಬ್ಬಂದಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ಸುವೆಂದು ಅಧಿಕಾರಿಗೆ ಸಿಐಡಿ ಸಮನ್ಸ್ ಜಾರಿ ಮಾಡಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಕೋಲ್ಕತ್ತಾದ ಭವಾನಿ ಭವನದಲ್ಲಿರುವ ಸಿಐಡಿ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
2018 ರಲ್ಲಿ ಪೂರ್ವ ಮೆದಿನಿಪುರದಲ್ಲಿ ಭದ್ರತಾ ಸಿಬ್ಬಂದಿ ಚಕ್ರವರ್ತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಜ್ಯ ಸಶಸ್ತ್ರ ಪೊಲೀಸ್ ಸಿಬ್ಬಂದಿಯಾಗಿದ್ದ ಚಕ್ರವರ್ತಿ, ಸುವೆಂದು ಅಧಿಕಾರಿಯ ಭದ್ರತಾ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಸುವೆಂದು ಅಧಿಕಾರಿ ಟಿಎಂಸಿ ತೊರೆದು ಬಿಜೆಪಿಗೆ ಸೇರಿದ ಬಳಿಕ, ಮೃತನ ಪತ್ನಿ ಸುಪರ್ಣ ಚಕ್ರವರ್ತಿ ತನ್ನ ಗಂಡನ ಸಾವಿನ ತನಿಖೆಗೆ ಒತ್ತಾಯಿಸಿ ಕೊಟೈ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದರು. ಕೆಲವೇ ದಿನಗಳಲ್ಲಿ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಯಿತು.
ಇದನ್ನೂ ಓದಿ: ಚುನಾವಣಾ ಚಾಣಕ್ಯನ ಪಕ್ಷ ಸೇರ್ಪಡೆಗೆ ಸಮಿತಿ ರಚಿಸಿದ ಕಾಂಗ್ರೆಸ್.. ಗೊಂದಲದ ಗೂಡಾದ ‘ಕೈ’ ಪಕ್ಷ
ತನಿಖೆಯ ಭಾಗವಾಗಿ ಜುಲೈನಲ್ಲಿ ಪೂರ್ವ ಮೆದಿನಿಪುರದಲ್ಲಿರುವ ಸುವೆಂದು ಅಧಿಕಾರಿ ನಿವಾಸದ ಮೇಲೆ ಸಿಐಡಿ ತಂಡ ದಾಳಿ ನಡೆಸಿತ್ತು. ಚಕ್ರವರ್ತಿಯ ಸಹೋದ್ಯೋಗಿಗಳ ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿದ ಸಿಐಡಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದರು.