ಬೆಳಗಾವಿ: ಹಾಡಹಗಲೇ ಮಕ್ಕಳ ಅಪಹರಣಕ್ಕೆ ಯತ್ನಿಸಿರುವ ಘಟನೆ ನಗರದ ಹೊರ ವಲಯದಲ್ಲಿರುವ ಕಂಗ್ರಾಳಿ ಬಿ.ಕೆ ಗ್ರಾಮದಲ್ಲಿ ನಡೆದಿದ್ದು, ಕುಂದಾನಗರಿ ಬೆಚ್ಚಿ ಬಿದ್ದಿದೆ.
ಆಟವಾಡುತ್ತಿದ್ದ ಮಕ್ಕಳನ್ನು ಟಾರ್ಗೆಟ್ ಮಾಡಿ ಕಿಡ್ನಾಪ್ ಮಾಡಲು ಗ್ಯಾಂಗ್ ಹೊಂಚು ಹಾಕಿತ್ತು. ಓಮಿನಿ ಕಾರಲ್ಲಿ ಬಂದ ಗ್ಯಾಂಗ್ ಆಟ ಆಡುತ್ತಿದ್ದ ಮಕ್ಕಳ ಬಳಿ ತೆರಳಿ, ಚಾಕೋಲೆಟ್ ಕೊಡುವುದಾಗಿ ಆಮಿಷವೊಡ್ಡಿದೆ. ಏಳು ವರ್ಷದ ಬಾಲಕಿ, ಐದು ವರ್ಷದ ಬಾಲಕಿಯನ್ನು ತನ್ನತ್ತ ಸೆಳೆದಿರುವ ಗ್ಯಾಂಗ್ ಬಳಿಕ ಅವರನ್ನು ಹೊತ್ತೊಯ್ದು ಕಾರಲ್ಲಿ ಕೂರಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.
ಕೂಡಲೇ ಇದನ್ನು ಗಮನಿಸಿದ ಸ್ಥಳೀಯರು ಕಿರುಚಾಡಿದಾಗ ಮಕ್ಕಳನ್ನ ಬಿಟ್ಟು ಖದೀಮರು ಓಡಿ ಹೋಗಿದ್ದಾರೆ. ಉಮೇಶ್ ಕಾಂಬ್ಳೆ ಎಂಬುವರ ಮಕ್ಕಳನ್ನು ಅಪಹರಣ ಮಾಡಲು ಯತ್ನಿಸಲಾಗಿದೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಗುರುವಾರ ಬೆಂಗಳೂರಿನಲ್ಲೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿತ್ತು. ಬೀದಿಯಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಚಾಕೋಲೆಟ್ ಆಮಿಷ ತೋರಿಸಿ ಖದೀಮರು ಅಪಹರಣಕ್ಕೆ ಮುಂದಾಗಿದ್ದರು. ಸ್ಥಳೀಯರ ಸಮಯಪ್ರಜ್ಞೆಯಿಂದ ಮಕ್ಕಳು ಕಿಡ್ನಾಪರ್ಸ್ಯಿಂದ ಬಚಾವಾಗಿದ್ದರು.