ಹೈದರಾಬಾದ್: ದೇಶದ ಭದ್ರತೆಗೆ ಸವಾಲಾಗಿದ್ದ ಚೀನಾದ ಹಲವು ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಕೆಲ ತಿಂಗಳುಗಳ ಹಿಂದೆ ನಿಷೇಧ ಮಾಡಿತ್ತು. ಆದರೆ, ಡ್ರ್ಯಾಗನ್ ದೇಶ ಭಾರತ ನಾಗರಿಕರನ್ನು ವಂಚಿಸಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದು, ಸಾಲ ನೀಡುವ ಆ್ಯಪ್‌ಗಳ ಮೂಲಕ ದೇಶಕ್ಕೆ ಲಗ್ಗೆ ಇಟ್ಟಿವೆ.
ಆ್ಯಪ್ ಕಂಪನಿಗಳು ಸಾಲ ನೀಡುವ ಆಸೆ ತೋರಿಸಿ ಮೋಸ ಮಾಡಲು ಹೊಸ ಮಾರ್ಗಗಳನ್ನು ಕಂಡು ಕೊಂಡಿದ್ದು, ನೆರೆಯ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಈ ಕಂಪನಿಗಳು ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಲು ಉದ್ದೇಶಿಸಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸೈಬರ್ ಕ್ರೈಂ ಪೊಲೀಸರು ನಡೆಸಿದ ತನಿಖೆಯಲ್ಲಿ ನಕಲಿ ವ್ಯವಹಾರಗಳ ಕುರಿತ ಮಹತ್ವದ ಮಾಹಿತಿಯನ್ನು ಹೈದರಾಬಾದ್ ಪೊಲೀಸರು ಪಡೆದಿದ್ದಾರೆ. ಚೀನಾ ಬೆಂಬಲಿತ ಸಾಲದ ಅಪ್ಲಿಕೇಶನ್ ಕಂಪನಿಗಳು ನಗರದಲ್ಲಿ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಲು ಯೋಜಿಸಲು ಮುಂದಾಗಿದ್ದವು ಎಂದು ಹೇಳಿದ್ದಾರೆ.
ಸೈಬರ್ ಅಪರಾಧಗಳ ಹಾಟ್‌ಸ್ಪಾಟ್‌ಗಳು..
ಪ್ರಸ್ತುತ ಉತ್ತರ ಪ್ರದೇಶ, ದೆಹಲಿ, ಮುಂಬೈ ಹಾಗೂ ರಾಜಸ್ಥಾನ ದೇಶದಲ್ಲಿ ಸೈಬರ್ ಅಪರಾಧಗಳ ಹಾಟ್‌ಸ್ಪಾಟ್‌ಗಳಾಗಿವೆ. ಇಲ್ಲಿನ ಗ್ರಾಮೀಣ ಯುವಕರಿಗೆ ಆನ್‌ಲೈನ್ ಮೂಲಕ ಸಾಲ ನೀಡುವುದಾಗಿ ಹೇಳಿ ವಂಚನೆ ಮಾಡಲಾಗುತ್ತದೆ. ಬಳಿಕ ಪೊಲೀಸ್ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ವಂಚಕರು ತಮ್ಮ ನೆಲೆಯನ್ನು ಬದಲಾಯಿಸುತ್ತಿದ್ದಾರೆ.
ರಾಚಕೊಂಡ ಪೊಲೀಸರ ನೇತೃತ್ವದ ತಂಡ ಇತ್ತೀಚೆಗೆ ಸೈಬರ್ ಕ್ರೈಮ್ ತನಿಖೆ ನಡೆಸಿ ಚೆನ್ನೈ ಮತ್ತು ಕೊಯಮತ್ತೂರಿನಲ್ಲಿ ಇದೇ ರೀತಿಯ ವಂಚನೆಯ ಗ್ಯಾಂಗ್‌ಗಳಿವೆ ಎಂದು ಹೇಳಿದೆ. ಆ ಪ್ರದೇಶಗಳಲ್ಲಿ ಅವರ ಯೋಜನೆಗಳ ಯಶಸ್ಸಿನ ನಂತರ ಅವರು ತಮ್ಮ ಕಾರ್ಯಾಚರಣೆಯನ್ನು ಹೈದರಾಬಾದ್, ವಿಜಯವಾಡ ಹಾಗೂ ವಿಶಾಖಪಟ್ಟಣಕ್ಕೆ ವಿಸ್ತರಿಸಿದ್ದಾರೆ ಎಂದು ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಇತ್ತೀಚೆಗೆ ರಾಚಕೊಂಡ ಸೈಬರ್ ಕ್ರೈಂ ಪೊಲೀಸರು ಮೂವರು ನೇಪಾಳಿಗಳನ್ನು ಬಂಧಿಸಿದ್ದರು. ತನಿಖೆ ನಡೆಸಿದಾಗ ನಗರದಲ್ಲಿ ಟೆಲಿ ಕಾಲಿಂಗ್ ಸೆಂಟರ್ ಸ್ಥಾಪಿಸಲು ಯತ್ನಿಸಿರುವುದು ಪತ್ತೆಯಾಗಿದೆ. ಆರೋಪಿಗಳ ಫೋನ್‌ಗಳಲ್ಲಿ ಸಿಕ್ಕಿರುವ ಸಂಪರ್ಕಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಂಚನೆಯ ಪ್ಲಾನ್ ಹೇಗಿರುತ್ತೆ ಗೊತ್ತಾ?
ಚೀನಾ ಮೂಲದ ಆ್ಯಪ್‌ಗಳು ಕಾಲ್ ಸೆಂಟರ್‌ಗಳನ್ನು ಸ್ಥಾಪಿಸುವ ಮುನ್ನ ನಕಲಿ ಕಂಪನಿಗಳ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ಬ್ಯಾಂಕ್ ಖಾತೆ ತೆರೆಯುವಂತೆ ಜನರನ್ನು ಒತ್ತಾಯಿಸುತ್ತವೆ. ಇದಕ್ಕಾಗಿ ಸ್ಥಳೀಯರನ್ನು ಏಜೆಂಟ್‌ಗಳಾಗಿ ನೇಮಿಸಿಕೊಳ್ಳುತ್ತವೆ. ಇವರಿಗೆ ತಿಂಗಳಿಗೆ 12 ರಿಂದ 15 ಸಾವಿರ ಕಮಿಷನ್ ನೀಡಲಾಗುತ್ತದೆ. ಕಂಪನಿಗಳು ಜೂಮ್ ಕಾನ್ಫರೆನ್ಸ್‌ಗಳ ಮೂಲಕ ಏಜೆಂಟ್‌ಗಳಿಗೆ ಕೆಲಸದ ಜವಾಬ್ದಾರಿಗಳನ್ನು ವಿವರಿಸುತ್ತವೆ. ಚೀನಾದ ಕಂಪನಿಗಳು ಬ್ಯಾಂಕ್ ಖಾತೆಗಳನ್ನು ತೆರೆಯಲು ಅಗತ್ಯವಾದ ನಕಲಿ ದಾಖಲೆಗಳನ್ನು ಸಹ ಒದಗಿಸುತ್ತವೆ.
ಜನರ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದು ಖಾತೆಯಲ್ಲಿರುವ ಹಣವನ್ನು ಎಗರಿಸೋದು ಹೇಗೆ ಎಂಬುದರ ಬಗ್ಗೆ ಯೋಜಿಸುತ್ತವೆ. ಈ ಹಣವನ್ನು ಕ್ರಿಪ್ಟೋಕರೆನ್ಸಿಗೆ ಪರಿವರ್ತಿಸಲಾಗುತ್ತದೆ ಹಾಗೂ ಚೀನಾಗೆ ವರ್ಗಾಯಿಸಲಾಗುತ್ತದೆ ಎಂಬ ಅಚ್ಚರಿ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ಅಲ್ಪಾವಧಿಯಲ್ಲಿ ಸಾಕಷ್ಟು ಹಣ ಗಳಿಸುವ ಆಸೆಯಲ್ಲಿ ಅನೇಕರು ಇಂತಹ ವಂಚನೆಗಳಿಗೆ ಬಲಿಯಾಗುತ್ತಾರೆ. ತ್ವರಿತ ಹಣದ ಯೋಜನೆಗಳಿಂದ ದೂರವಿರಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ಸೈಬರ್ ಕ್ರೈಮ್ ಇಲಾಖೆಗೆ ದೂರು ನೀಡುವಂತೆ ಪೊಲೀಸರು ಜನರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಈ ವರ್ಷ ₹51 ಸಾವಿರ ಕೋಟಿ ವಿದೇಶಿ ಬಂಡವಾಳ ಹೂಡಿಕೆ : ಮುಂದಿನ ವರ್ಷ ಇನ್ನೂ ಹೆಚ್ಚಾಗುವ ನಿರೀಕ್ಷೆ