ವಿಶಾಖಪಟ್ಟಣಂ(ಆಂಧ್ರಪ್ರದೇಶ) : ತನಗೆ ಇಷ್ಟವಾದ ನಾಯಿ ಮರಿಯನ್ನು ಕೊಡಿಸದಿದ್ದಕ್ಕೆ ಬೇಸತ್ತ ಅಪ್ರಾಪ್ತನೆೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. 16 ವರ್ಷದ ಷಣ್ಮುಖ ವಂಶಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನತದೃಷ್ಟ.
ಮೃತನ ತಂದೆ ಆರು ವರ್ಷದ ಹಿಂದೆ ಮೃತಪಟ್ಟಿದ್ದರು. ತನ್ನ ಏಕೈಕ ಪುತ್ರನೊಂದಿಗೆ ಉಮಾ ಅವರು ವಾಸ ಮಾಡುತ್ತಿದ್ದರು. ಆನ್‌ಲೈನ್‌ನಲ್ಲಿ ವಂಶಿ 30 ಸಾವಿರ ರೂಪಾಯಿ ಮೌಲ್ಯದ ನಾಯಿ ಮರಿಯೊಂದನ್ನು ನೋಡಿದ್ದ. ಮರಿಯನ್ನು ಕೊಡಿಸುವಂತೆ ತಾಯಿಯನ್ನು ಒತ್ತಾಯಿಸಿದ್ದ. ಮುಂದೆ ಕೊಡಿಸುವುದಾಗಿ ತಾಯಿ ಕೂಡ ಭರವಸೆ ನೀಡಿದ್ದರು.
ಇದನ್ನೂ ಓದಿ: ಪತ್ರಕರ್ತನ ನಿಗೂಢ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ: ಯೋಗಿಗೆ ಪ್ರಿಯಾಂಕಾ ಪತ್ರ
ಕಳೆದ ವರ್ಷ ಆಡಾರಿ ಉಮಾ ಅವರ ತಂದೆ, ಅಜ್ಜಿ ಹಾಗೂ ಚಿಕ್ಕಮ್ಮ ಕೋವಿಡ್‌ಗೆ ಬಲಿಯಾಗಿದ್ದರು. ಇವರ ಉತ್ತರಾಧಿಕಾರಿ ಸರ್ಫಿಕೇಟ್ ತರಲು ಗಾಜುವಾಕಾಗೆ ತೆರಳಿದ್ದರು. ಇದನ್ನು ತಮ್ಮ ಪುತ್ರನಿಗೆ ತಿಳಿಸುವಂತೆ ನೆರೆಯ ಮನೆಯವರಿಗೆ ಫೋನ್ ಮಾಡಿ ಹೇಳಿದ್ದಾರೆ. ಅದರಂತೆ ಪಕ್ಕದ ಮನೆಯವರಿಗೆ ಮಾಹಿತಿ ನೀಡಲು ಹೋದಾಗ ಒಳಗಡೆಯಿಂದ ಮನೆಯ ಬಾಗಿಲು ಲಾಕ್ ಆಗಿತ್ತು.
ಅನುಮಾನಗೊಂಡು ಬಾಗಿಲನ್ನು ಒಡೆದು ಒಳಗಡೆ ಹೋದಾಗ ವಂಶಿ ನೇಣುಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ, ಆ ವೇಳೆಗೆ ಮೃತ ಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.