ವಿಶಾಖಪಟ್ಟಣ(ಆಂಧ್ರಪ್ರದೇಶ): ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ 74 ವರ್ಷದ ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ ಮತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ವಿಶಾಖಪಟ್ಟಶಣದ ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಕೆ. ರಾಮಶ್ರೀನಿವಾಸ ರಾವ್ ಈ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ ತಿಂಗಳು ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ. ಸಂತ್ರಸ್ತೆಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.
ಪೋಕ್ಸೋ ನ್ಯಾಯಾಲಯದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕರಣಂ ಕೃಷ್ಣ ನೀಡಿದ ಮಾಹಿತಿಯ ಪ್ರಕಾರ- ಅರಿಲೋವಾ ಪ್ರದೇಶದ ಬಾಲಕಿ (9) ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ. ಬಾಲಕಿಯ ತಾಯಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಶಾಲೆ ಬಿಟ್ಟ ನಂತರ ಮಗಳನ್ನು ದುರ್ಗಾ ಬಜಾರ್ ಪ್ರದೇಶದ ತನ್ನ ಸ್ನೇಹಿತೆಯ ಮನೆಗೆ ಬಿಡುತ್ತಿದ್ದರು. ಅಲ್ಲಿ ಆಕೆಯ ಸ್ನೇಹಿತನ ಸೋದರ ಸಂಬಂಧಿ ಬಾಲಯೋಗಿ (74) ಎಂಬುವರು ವಾಸವಾಗಿದ್ದರು.
ಈ ವರ್ಷ ಮಾರ್ಚ್ 23 ರಂದು ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಯಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಾಲಕಿ ಸೋಂಕಿನಿಂದ ಬಳಲುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ತಾಯಿ ಮಗಳನ್ನು ಪ್ರಶ್ನಿಸಿದಾಗ ಬಾಲಯೋಗಿ ತನ್ನ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿದ್ದಾಳೆ. ಸಂತ್ರಸ್ತೆಯ ತಾಯಿಯ ದೂರಿನ ಮೇರೆಗೆ ವಿಶಾಖಪಟ್ಟಣಂ ಪೊಲೀಸ್ ಠಾಣೆಯ ಎಸಿಪಿ ಪ್ರೇಮಕಾಜಲ್ ಪ್ರಕರಣ ದಾಖಲಿಸಿಕೊಂಡು ಆರೋಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಪರಾಧ ಸಾಬೀತಾಗಿದ್ದರಿಂದ ತಪ್ಪಿತಸ್ಥನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಅಪ್ರಾಪ್ತೆಯ ಮದುವೆ.. ಪೋಕ್ಸೊ ಪ್ರಕರಣ.. ಅನೈತಿಕ ಸಂಬಂಧ ಆರೋಪ; ಹೀಗೊಂದು ವಿವಾಹದ ಕಥೆ