ತುಮಕೂರು: ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ನಿರ್ಮಿಸುತ್ತಿರುವ ರಸ್ತೆ ಕಿರಿದಾಗಿ ಅದಕ್ಕಿಂತ ವಿಶಾಲವಾಗಿ ಫೂಟ್ ಪಾತ್ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಸ್ಥಳೀಯರೇ ಕಾಮಗಾರಿ ನಿಲ್ಲಿಸಿರುವ ಘಟನೆ ನಗರದ ಜನರಲ್ ಕರಿಯಪ್ಪ ರಸ್ತೆಯಲ್ಲಿ ನಡೆದಿದೆ.
ಕೆ.ಆರ್ ಬಡಾವಣೆಯಿಂದ ಗ್ರಾಮಾಂತರ ಪೊಲೀಸ್ ಠಾಣೆವರೆಗೆ 530 ಮೀಟರ್ ಉದ್ದದ ರಸ್ತೆ ಅಭಿವೃದ್ಧಿಗೆ 3.37 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. 2018ರ ಡಿಸೆಂಬರ್ 5ರಿಂದ ಪ್ರಾರಂಭಗೊಂಡ ಕಾಮಗಾರಿ 2019ರ ಡಿಸೆಂಬರ್ 5ಕ್ಕೆ ಮುಗಿಯಬೇಕಿತ್ತು, 2020 ಫೆಬ್ರವರಿ ಮುಗಿಯುತ್ತ ಬಂದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಗುಣಮಟ್ಟ ಪರಿಶೀಲಿಸದೆ ಹಿರಿಯ ಅಧಿಕಾರಿಗಳ ಆದೇಶವಿದೆ ಎಂದು 15 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆಯ ಮೇಯರ್ ಫರೀದಾ ಬೇಗಮ್, ಸ್ಮಾರ್ಟ್ ಸಿಟಿ ವತಿಯಿಂದ ನಡೆಯುತ್ತಿರುವ ಫೂಟ್ ಪಾತ್ ಕಾಮಗಾರಿ ತುಂಬಾ ಸಮಸ್ಯೆಯಿಂದ ಕೂಡಿದೆ. ರಸ್ತೆಗಿಂತಲೂ ಹೆಚ್ಚಾಗಿ ಫೂಟ್ ಪಾತ್ ನಿರ್ಮಿಸಲು ಹೆಚ್ಚು ಸ್ಥಳವನ್ನು ತೆಗೆದುಕೊಂಡಿದ್ದಾರೆ, ಏಕೆಂದು ನನಗೆ ತಿಳಿದಿಲ್ಲ. ಈ ಕುರಿತು ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸ್ಥಳ ಪರಿಶೀಲನೆ ನಡೆಸಿ, ನಂತರ ಕಾಮಗಾರಿ ನಡೆಸಲು ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ರಸ್ತೆಯ ಮುಕ್ಕಾಲು ಭಾಗ ಫೂಟ್ ಪಾತ್ ನಿರ್ಮಾಣ ಮಾಡುತ್ತಿದ್ದಾರೆ, ಹಾಗಾಗಿ ಫೂಟ್ ಪಾತ್ ಬೇಡ ಎಂದು ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದೇವೆ. ಉತ್ತಮ ರಸ್ತೆ, ಫೂಟ್ ಪಾತ್ ಹಾಗೂ ಮಳೆ ಬಂದರೆ ಮಳೆನೀರು ಹೋಗಲು ಚರಂಡಿ ವ್ಯವಸ್ಥಿತವಾಗಿದ್ದರೆ ಸಾಕು. ಈಗಿನ ಸ್ಮಾರ್ಟ್ ಸಿಟಿ ಅಧಿಕಾರಿಗಳು ಇದಕ್ಕೆ ಖರ್ಚು ಮಾಡುವ ಹಣದಲ್ಲಿ ಈ ರಸ್ತೆಗೆ ಚಿನ್ನದ ಲೇಪನವನ್ನು ಮಾಡಬಹುದು ಎಂದು ವಾರ್ಡ್ ಸದಸ್ಯ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.