ತುಮಕೂರು: ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತುಮಕೂರು ನಗರಕ್ಕೆ ಯಾವುದು ಬೇಕು ಬೇಡ ಎಂಬುದರ ಬಗ್ಗೆ ತಿಳಿದಿದೆಯೋ ತಿಳಿದಿಲ್ಲವೋ ನನಗೆ ತಿಳಿಯುತ್ತಿಲ್ಲ, ಈಗ ನಡೆದಿರುವ ಕಾಮಗಾರಿಗಳಿಂದ ಶೇಕಡಾ ಐದರಷ್ಟು ಹಣ ಹಾಳಾಗಿದೆ ಅಧಿಕಾರಿಗಳ ನಡುವೆ ಹೊಂದಾಣಿಕೆ ಕಂಡುಬರುತ್ತಿಲ್ಲ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಶಾಸಕ ಜಿ.ಬಿ ಜ್ಯೋತಿಗಣೇಶ್ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಪಿಡಬ್ಲ್ಯೂಡಿ ಇಲಾಖೆಯ ಮೂಲಕ ಶಾಸಕರ ಅನುದಾನದಲ್ಲಿ 20 ಕೋಟಿ ರೂ. ಹಣ ನೀಡಿದ್ದು, ಈ ಹಣದಲ್ಲಿ ಪ್ರಮುಖವಾಗಿ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಈಗಾಗಲೇ ಹಲವು ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಪೂರ್ಣಗೊಳಿಸಿದ್ದು, ತಿಂಗಳೊಳಗೆ ಕಾಮಗಾರಿ ಪ್ರಾರಂಭ ಮಾಡಲಾಗುವುದು. ಹಾಗೂ ಕೆಲವು ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಸಲಾಗಿದೆ ಎಂದರು.
ಕ್ಯಾತಸಂದ್ರದ ಬಳಿ ಇರುವ ಬಂಡೆಪಾಳ್ಯದಿಂದ ದೇವರಾಯಪಟ್ಟಣದವರೆಗೆ ಮುಖ್ಯ ರಸ್ತೆ ಅಭಿವೃದ್ಧಿಗೆ 3 ಕೋಟಿ, ದಾನಃ ಪ್ಯಾಲೇಸ್ನಿಂದ ಗಂಗಸಂದ್ರದವರೆಗಿನ ಮುಖ್ಯ ರಸ್ತೆ ಅಭಿವೃದ್ಧಿಗೆ 5 ಕೋಟಿ, ಶೆಟ್ಟಿ ಹಳ್ಳಿಯಿಂದ ವಿನಾಯಕನಗರ, ಪಾಲಸಂದ್ರ ಮುಖ್ಯರಸ್ತೆಗೆ 2.25 ಕೋಟಿ. ಮೇಳೆಕೋಟೆಯಲ್ಲಿನ ಮುಖ್ಯ ರಸ್ತೆ ಅಭಿವೃದ್ಧಿಗೆ 5 ಕೋಟಿ ನೀಡಲಾಗಿದೆ. ಅದೇ ರೀತಿ ಅಗ್ನಿ ಶಾಮಕದಳದ ಕಚೇರಿ ಪಕ್ಕದಲ್ಲಿನ ಮುಖ್ಯ ರಸ್ತೆ ಅಭಿವೃದ್ಧಿ ರೈಲ್ವೆ ಗೇಟ್ ನಿಂದ ರಿಂಗ್ ರಸ್ತೆಯವರೆಗೆ ಮಾಡಲಾಗುವುದು ಎಂದರು.
ಮಹಾನಗರ ಪಾಲಿಕೆಗೆ 125 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಅದನ್ನು ಪಾಲಿಕೆ ಸದಸ್ಯರು ತಮ್ಮ ವಾರ್ಡ್ಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಕೇಳಿದ್ದಾರೆ. ಆದರೆ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಪ್ರಮುಖ ರಸ್ತೆಗಳ ಅಭಿವೃದ್ಧಿ ಮಾಡಬೇಕಿದೆ, ಅದಾದ ನಂತರ ಸಣ್ಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ನಗರಗಳಲ್ಲಿ ಸರಿಯಾಗಿ ಯುಜಿಡಿ ಕಾಮಗಾರಿ ಪೂರ್ಣಗೊಂಡಿಲ್ಲ, ಬೆಳಗುಂಬ ಭಾಗದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕಾಯಿಲೆಗಳು ಹರಡುವಂತಹ ಸನ್ನಿವೇಶವಿದೆ ಎಂದರು. ಗಾರ್ಡನ್ ರಸ್ತೆಯಲ್ಲಿರುವ ಯುಜಿಡಿಯಲ್ಲಿ ಕಸ-ಕಡ್ಡಿ ತಾಜ್ಯ ತುಂಬಿಕೊಂಡು ಬ್ಲಾಕ್ ಆಗಿದೆ, ಅದನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೊಸ ಯುಜಿಡಿ ಲೈನ್ ಹಾಕಬೇಕಿದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ಅವುಗಳನ್ನು ಸರಿಪಡಿಸಬೇಕಿದೆ. ಈಗಾಗಲೇ ಸಭೆಗಳನ್ನು ಮಾಡಿ ಅಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ತಿಳಿಸಲಾಗಿದೆ. 2018ರಲ್ಲಿ ವಿಧಾನಸಭಾ ಚುನಾವಣೆಯ ನಂತರ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಮೊದಲ ಸಭೆಯಲ್ಲಿ ಕಾರಿಯಪ್ಪ ರಸ್ತೆಯನ್ನು ಆಯ್ಕೆ ಮಾಡಿಕೊಂಡು ಮೊದಲು ಈ ರಸ್ತೆಯ ಕಾಮಗಾರಿ ಮುಗಿಸಿ, ಅಲ್ಲಿ ಎದುರಾಗುವ ಸಮಸ್ಯೆ ಸವಾಲುಗಳನ್ನು ತಿಳಿದುಕೊಂಡು ಇತರೆ ರಸ್ತೆಗಳಲ್ಲಿ ಕಾಮಗಾರಿ ಮಾಡಿ ಎಂದು ಸೂಚನೆ ನೀಡಲಾಗಿತ್ತು ಎಂದರು.
ಎಲ್ಲ ತೆರಿಗೆಗಳನ್ನು ಹೊರತುಪಡಿಸಿ, ಸ್ಮಾರ್ಟ್ ಸಿಟಿಗೆ 930 ಕೋಟಿ ರೂ. ಬಂದಿದ್ದು ಎಲ್ಲಾ ಕಾಮಗಾರಿಗಳಿಗೆ ಟೆಂಡರ್ ಮಾಡಲಾಗಿದೆ. ಆದರೆ ಕೊಟ್ಟ ಸೂಚನೆಯನ್ನು ಪಾಲಿಸದೆ ಗಾಂಧಿನಗರ, ಸಿಎಸ್ಐ ಲೇಔಟ್, ಚಿಕ್ಕಪೇಟೆಯಲ್ಲಿನ ರಸ್ತೆಗಳನ್ನು ತೆಗೆಯಲಾಯಿತು. ಸ್ಮಾರ್ಟ್ ರೋಡ್ ಯೋಜನೆಗೆ 18 ರಸ್ತೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಶೌಲ್ಡರ್ ಡೆವಲಪ್ಮೆಂಟ್ ಕಾರ್ಯಕ್ಕಾಗಿ 83 ರಸ್ತೆಗಳನ್ನು ತೆಗೆದುಕೊಳ್ಳಲಾಗಿದೆ. ಇದೆಲ್ಲದಕ್ಕೂ ಒಂದೇ ಬಾರಿ ಕಾಮಗಾರಿ ಪ್ರಾರಂಭ ಮಾಡಿದ್ದಕ್ಕಾಗಿ ಹೆಚ್ಚಿನ ಸಮಸ್ಯೆ ಎದುರಿಸುವಂತಾಯಿತು ಎಂದರು.
ಈಗಾಗಲೇ ಶೇಕಡಾ ಐದರಷ್ಟು ಹಣ ಹಾಳಾಗಿದ್ದು, ಇದಕ್ಕೆ ಉಸ್ತುವಾರಿ ಕಾರ್ಯದರ್ಶಿ ಸೇರಿದಂತೆ ಸ್ಮಾರ್ಟ್ ಸಿಟಿಯ ಸರ್ವಸದಸ್ಯರ ಹೊಣೆಗಾರಿಕೆ ವಹಿಸಿಕೊಳ್ಳಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಕಾಮಗಾರಿಗಳ ಗುಣಮಟ್ಟದಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ತಿಳಿಸಿದರು.
ಈಗ ಆಗಿರುವಂತಹ ಕಾಮಗಾರಿಗಳ ಬಗ್ಗೆ 15ನೇ ತಾರೀಖಿನ ನಂತರ ಸಭೆ ನಡೆಯಲಿದ್ದು, ಆಗ ಎಲ್ಲವೂ ತಿಳಿಯಲಿದೆ. ಇನ್ನು ಮಹಾನಗರಪಾಲಿಕೆಯ ಆಯುಕ್ತರಾಗಿದ್ದ ಭೂಬಾಲನ್ ಅವರು ಇಲ್ಲಿಗೆ ಮರಳಿ ಬರಲಿದ್ದು, ಬಡ್ತಿ ನೀಡುವವರೆಗೂ ಇಲ್ಲಿಯೇ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು. ಇನ್ನು ರಾಜ್ಯದಲ್ಲಿ ನಡೆದ ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ನೂರಕ್ಕೆ ನೂರರಷ್ಟು ಯಡಿಯೂರಪ್ಪನವರ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.