ತುಮಕೂರು: ಕಲ್ಪತರು ನಾಡಿನ ಅರಣ್ಯದಲ್ಲಿ ಯಥೇಚ್ಚವಾಗಿ ಶ್ರೀಗಂಧ ಸಂಪತ್ತನ್ನು ಅರಣ್ಯ ಇಲಾಖೆ ಅಭಿವೃದ್ಧಿಪಡಿಸುತ್ತಿದೆ. ಕಳೆದ 10 ವರ್ಷಗಳಿಂದ ಶ್ರೀಗಂಧದ ನೆಡುತೋಪುಗಳನ್ನು ಇಲಾಖೆ ಸಂರಕ್ಷಿಸುತ್ತಿದೆ.
ಆದರೆ ಅವು ಕಳ್ಳರ ಪಾಲಾಗಬಾರದು ಎಂಬ ಉದ್ದೇಶದಿಂದ ಇಲಾಖೆಯ ಸಿಬ್ಬಂದಿ ನಿರಂತರವಾಗಿ ಗಸ್ತು ತಿರುಗಲು ಆರಂಭಿಸಿದ್ದಾರೆ. ಹೀಗಿದ್ದರೂ ಇಲಾಖೆ ಸಿಬ್ಬಂದಿ ಕಣ್ಣುತಪ್ಪಿಸಿ ಶ್ರೀಗಂಧ ಚೋರರು ಮರಗಳನ್ನು ರಾತ್ರೋರಾತ್ರಿ ಕಡಿದು ಹೊತ್ತೊಯ್ಯುತ್ತಿದ್ದಾರೆ.
ಇದಕ್ಕೆ ಉದಾಹರಣೆ ಕುಣಿಗಲ್‌ನ ಕಂಪ್ಲಾಪುರ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್. ಈ ಘಟನೆಯಲ್ಲಿ ಓರ್ವನ ಸಾವು ಪ್ರಕರಣ ನಡೆದು ಇಪ್ಪತ್ತು ದಿನ ಕಳೆದಿಲ್ಲ. ಅಷ್ಟರಲ್ಲಿ, ಗುಬ್ಬಿ ತಾಲೂಕಿನ ಹರಗಲದೇವಿ ಕಾವಲ್ ಮೀಸಲು ಅರಣ್ಯದಲ್ಲಿ ಶ್ರೀಗಂಧ ಕಳ್ಳರನ್ನು ಬಂಧಿಸಲು ಅರಣ್ಯ ಇಲಾಖೆ ಗಾರ್ಡ್‌ಗಳು ಫೈರಿಂಗ್ ನಡೆಸಿದ್ದಾರೆ. ಇದರ ಪರಿಣಾಮ ಓರ್ವ ಗಾಯಗೊಂಡಿದ್ದು, ಮತ್ತಿಬ್ಬರು ಶ್ರೀಗಂಧ ಚೋರರನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.
ತಮಿಳುನಾಡು ಮೂಲದ ಈ ಶ್ರೀಗಂಧ ಕಳ್ಳರ ತಂಡ ಜಿಲ್ಲೆಯ ವಿವಿಧೆಡೆ ಇರುವ ಅಮೂಲ್ಯ ಶ್ರೀಗಂಧದ ಮರಗಳ ಮೇಲೆ ವಕ್ರದೃಷ್ಠಿ ಬಿದ್ದಿದೆ. ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಮರಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಇವರನ್ನು ಹಿಡಿಯಲು ತುಮಕೂರು ಅರಣ್ಯ ಇಲಾಖೆ ಟೊಂಕಕಟ್ಟಿ ನಿರಂತರವಾಗಿ ತಲಾಶ್ ನಡೆಸುತ್ತಾ ಬಂದಿದ್ದರು. ಇವರನ್ನು ಹಿಡಿದು ಹೆಡೆಮುರಿ ಕಟ್ಟಲು ಸಾಧ್ಯವಾಗಿರಲಿಲ್ಲ. ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಹುಲುಸಾಗಿ ಶ್ರೀಗಂಧದ ಮರಗಳನ್ನು ಬೆಳೆಸಿದೆ. ಆದ್ರೆ ಅದನ್ನು ಕಳ್ಳರಿಂದ ಸಂರಕ್ಷಿಸೋದೇ ಸವಾಲಾಗಿ ಪರಿಣಮಿಸಿದೆ.