ತುಮಕೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್‌ಗೆ ಬರೆದಿರುವ ಪತ್ರ ಬಹಿರಂಗಗೊಂಡಿದೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸೋಲಿಗೆ ಮುಖ್ಯವಾಗಿ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹಾಗೂ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ ಅವರುಗಳು ಬಿಜೆಪಿ ಅಭ್ಯರ್ಥಿ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು ಎಂದು ಪತ್ರದಲ್ಲಿ ಬರೆಯಲಾಗಿದೆ.
ಮಾಜಿ ಸಂಸದ ಮುದ್ದಹನುಮೇಗೌಡ ಅವರು ಕೂಡ, ಮಧುಗಿರಿ ಮತ್ತು ಕೋಳಾಲ ಎರಡೂ ಕಡೆ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತ್ರ ಭಾಗವಹಿಸಿ, ಮತ್ತೆಲ್ಲೂ ಬಾರದೇ ಇರುವುದು ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಸಾಧಿಸಲು ಕಾರಣವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಬ್ಬರು ನಾಯಕರ ನಿರಾಸಕ್ತಿ ಹಿನ್ನೆಲೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕೇವಲ ಎರಡೂವರೆ ಸಾವಿರ ಮತ ಬಂದಿತ್ತು. ಆದ್ರೆ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ 72,909 ಮತಗಳು ಲಭಿಸಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮಾಜಿ ಶಾಸಕ ಕೆ.ಎನ್ ರಾಜಣ್ಣ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ, ಜಿಪಂ ಸದಸ್ಯರಾದ ಜೆ.ಜೆ ರಾಜಣ್ಣ, ಚೌಡಪ್ಪ, ಶಾಂತಲಾ ರಾಜಣ್ಣ, ಮಂಜುಳಾ ಆದಿನಾರಾಯಣ ರೆಡ್ಡಿ, ತಾಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರು, ಸಹಕಾರ ಮಹಾಮಂಡಳದ ಅಧ್ಯಕ್ಷ ಗಂಗಣ್ಣ ಇವರುಗಳು ಬಿಜೆಪಿ ಅಭ್ಯರ್ಥಿ ಪರವಾಗಿ ಹಣ ಹಂಚಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗೆ ಇಲ್ಲಿ ಮುನ್ನಡೆ ಆಗಿದೆ. ಕಾಂಗ್ರೆಸ್ ಪಕ್ಷದಿಂದ ನೀಡಿದಂತಹ ಹಣವನ್ನು ಸಹ ಬಿಜೆಪಿ ಮತದಾರರಿಗೆ ಹಂಚಿ ಬಿಜೆಪಿ ಅಭ್ಯರ್ಥಿ 72,909 ಮತ ಪಡೆಯಲು ಕಾರಣರಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹೀಗಾಗಿ ಈ ಎಲ್ಲಾ ಮುಖಂಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ತಿಳಿಸಿದ್ದಾರೆ.