ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ನವಿಲುಗಳ ಸಂತತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬೆಳವಣಿಗೆ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಕರಿಗೆ ಸಂತಸ ತಂದಿದೆ.
ಹೌದು, ತುಮಕೂರು ಜಿಲ್ಲೆಯ ಪಾವಗಡ, ತುಮಕೂರು ತಾಲೂಕು, ಗುಬ್ಬಿ, ತುರುವೇಕೆರೆ, ತಿಪಟೂರು ಭಾಗದಲ್ಲಿ ಬೆಳಗ್ಗೆ ಹಾಗೂ ಸಂಜೆ ಆಯ್ತು ಎಂದರೆ ಹೊಲಗದ್ದೆಗಳು ಹಾಗು ತೋಟಗಳಲ್ಲಿ ಹಿಂಡುಹಿಂಡಾಗಿ ನವಿಲು ಕಾಣಿಸಿಕೊಳ್ಳುತ್ತಿವೆ. ತೆಂಗಿನ ತೋಟ, ಅಡಿಕೆ ತೋಟ ಹಾಗೂ ಬಾಳೆ ತೋಟಗಳಲ್ಲಿ ವಿಹರಿಸುವುದು ಸರ್ವೇಸಾಮಾನ್ಯವಾಗಿದೆ. ನಾಟ್ಯಮಯೂರಿಗಳು ರೈತರ ಹೊಲ ಗದ್ದೆಗಳಲ್ಲಿ ವಿಹರಿಸುತ್ತಾ ಆನಂದ ಪಡುತ್ತಿವೆ. ಯಾರಾದರೂ ಕಂಡರೆ ಆದಷ್ಟು ಬೇಗ ಗಿಡಗಂಟಿಗಳ ಮರೆಯಲ್ಲಿ ಹೋಗಿ ಬಚ್ಚಿಟ್ಟಿ ಕೊಳ್ಳುತ್ತವೆ.
ನವಿಲುಗಳ ಬೇಟೆ ನಿಷೇಧ ಮತ್ತು ನಿರಂತರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯದಿಂದ ನವಿಲುಗಳ ಸಂತತಿ ಹೆಚ್ಚುತ್ತಿದೆ. ರಸ್ತೆ ಬದಿ ಡಾಬಾಗಳು ಮತ್ತು ಹೋಟೆಲ್ಗಳಲ್ಲಿ ಮಾರುವೇಷದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿ ನವಿಲು ಮಾಂಸ ಮಾರಾಟ ಮಾಡಲಾಗುತ್ತಿದೇ ಎಂದು ಪರೀಕ್ಷೆ ನಡೆಸುತ್ತಿದ್ದಾರೆ. ಅಲ್ಲದೆ ಈ ಕುರಿತು ಕಠಿಣವಾದ ಕಾನೂನು ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ತಿಳಿಸಿದ್ದಾರೆ.