ತುಮಕೂರು: ತರಗತಿ ವೇಳೆ ಪಾಠ ಮಾಡದೆ ಮೊಬೈಲ್ ನೋಡುತ್ತಾ ಶಿಕ್ಷಕಿಯರು ಕಾಲಹರಣ ಮಾಡುತ್ತಿದ್ದು ನಮ್ಮ ಭವಿಷ್ಯಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರಕ್ಕೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾಳೆ.
ಮಧುಗಿರಿ ತಾಲೂಕಿನ ಪುರುವರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಪಿ ಆರ್ ವೈಷ್ಣವಿ ಪತ್ರ ಬರೆದಿದ್ದಾರೆ. ಶಾಲೆಯ ಶಿಕ್ಷಕಿಯರು ತಮ್ಮ ಸಣ್ಣ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದು ಅವರ ಲಾಲನೆ ಪಾಲನೆ ಮಾಡುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರ ಜೊತೆಗೆ ಮೊಬೈಲ್ ನೋಡುತ್ತಾ ಪಾಠ ಮಾಡದೇ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಶಾಲೆಯ ಹಿಂಭಾಗ ಗಿಡಗಂಟಿಗಳು ಬೆಳೆದು ನಿಂತಿದ್ದು, ಹಾವು ಮತ್ತು ಚೇಳುಗಳ ಆವಾಸ ಸ್ಥಾನವಾಗಿದೆ. ಶಾಲೆಯ ಬಾಗಿಲು ತೆರೆದ್ರೆ ಒಳಗೆ ಬಂದು ತೊಂದರೆ ಕೊಡುತ್ತಿವೆ. ಆದ್ದರಿಂದ ಸೀಮೆಜಾಲಿ ಮತ್ತು ಗಿಡಗಂಟಿಗಳನ್ನು ತೆಗೆದು ರಸ್ತೆ ಸರಿ ಮಾಡುವಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾಳೆ.