ತುಮಕೂರು: ದೆಹಲಿಯ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಅಭಿವೃದ್ಧಿಗೊಂಡಿವೆ. ಮಕ್ಕಳಿಗೆ ಎಂತಹ ಶಿಕ್ಷಣ ನೀಡುತ್ತೇವೆಯೋ, ಅಂತಹ ಸಮಾಜ ಭವಿಷ್ಯದಲ್ಲಿ ನಿರ್ಮಾಣವಾಗುತ್ತದೆ. ಆದ್ದರಿಂದ ರಾಜ್ಯದ ಶಿಕ್ಷಣ ವ್ಯವಸ್ಥೆ ದೆಹಲಿ ಮಾದರಿಯಲ್ಲಿ ಅಭಿವೃದ್ಧಿಯಾಗಬೇಕು ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಆಮ್ ಆದ್ಮಿ ಪಕ್ಷದ ಮುಖಂಡರೊಂದಿಗೆ ಮಾತನಾಡಿ, ನಂತರ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಪ್ರಾರ್ಥನೆ ಬಳಿಕ ಮಾತನಾಡಿದ ಸ್ವಾಮೀಜಿ, ಎಲ್ಲೆಡೆ ಶಿಕ್ಷಣದ ಗುಣಮಟ್ಟ ಉನ್ನತಗೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಸಿದ್ದಗಂಗಾ ಮಠದ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಮಾತ್ರ ಮೌಲ್ಯಯುತ ಸಮಾಜ ನಿರ್ಮಾಣವಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದರು.
ಅನ್ನ, ಅಕ್ಷರ ಹಾಗೂ ಆಶ್ರಯವೆಂಬ ತ್ರಿವಿಧ ದಾಸೋಹದಲ್ಲಿ ಶ್ರೀ ಸಿದ್ದಗಂಗಾ ಮಠವು ನಿರತವಾಗಿದೆ. ಧಾರ್ಮಿಕ ಕೆಲಸದ ಜೊತೆ ಜೊತೆಗೆ ಮಕ್ಕಳಿಗೆ ಶಿಸ್ತು, ಶಿಕ್ಷಣ ಕಲಿಸುವ ಮೂಲಕ ದೇಶ ನಿರ್ಮಾಣದ ಕೆಲಸವನ್ನೂ ಮಠ ಮಾಡುತ್ತಿದೆ.
ದೆಹಲಿಯ ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಸರ್ಕಾರ ಕೂಡ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ಆಯವ್ಯಯದಲ್ಲಿ ಶೇ. 25ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡುತ್ತಿದೆ. ಕರ್ನಾಟಕದ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಆಮ್ ಆದ್ಮಿ ಪಾರ್ಟಿಯ ಸರ್ಕಾರ ಇಲ್ಲಿ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಮುಖಂಡರಾದ ರೋಮಿ ಭಾಟಿ, ಜಗದೀಶ್ ವಿ ಸದಂ, ಕುಶಲಸ್ವಾಮಿ, ಬಿ ಟಿ ನಾಗಣ್ಣ, ಸುರೇಶ್ ರಾಥೋಡ್, ವಿಜಯ್ ಶಾಸ್ತ್ರಿ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ: Karnataka Earthquake: ಚಿಕ್ಕಬಳ್ಳಾಪುರದಲ್ಲಿ ಲಘು ಭೂಕಂಪನ