ತುಮಕೂರು: ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರು ದೂರ ದೃಷ್ಟಿಕೋನದಿಂದ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಅವರ ಕನಸಿನ ಕೂಸೇ ಸಿದ್ದಗಂಗಾ ಪ್ರೌಢಶಾಲೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಸಿದ್ದಗಂಗಾ ಪ್ರೌಢಶಾಲೆಯಲ್ಲಿ 1993-94ನೇ ಸಾಲಿನ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಶಿಕ್ಷಕರ ವೃತ್ತಿ ಪವಿತ್ರವಾದದ್ದು. ನಿವೃತ್ತಿ ಹೊಂದಿದ ಮೇಲೆ ಅವರನ್ನು ಕರೆಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ದಗಂಗಾ ಶಿಕ್ಷಣ ಸಂಸ್ಥೆಗಳಿಗೆ ಸಿದ್ದಗಂಗಾ ಪ್ರೌಢಶಾಲೆ ಶಿಕ್ಷಣ ಸಂಸ್ಥೆ ಹಿರಿಯಣ್ಣನಂತೆ. ಎಂಜಿನಿಯರಿಂಗ್ ಕಾಲೇಜು, ಪದವಿ ಕಾಲೇಜು ಸೇರಿದಂತೆ ಎಲ್ಲವೂ ಇಲ್ಲಿಯೇ ಪ್ರಾರಂಭವಾಗಿರುವುದು. ಈ ಎಲ್ಲದಕ್ಕೂ ಮೂಲ ಕಾರಣ ಶಿವಕುಮಾರ ಸ್ವಾಮೀಜಿ. ಅವರು ಪ್ರತಿ ಶುಕ್ರವಾರ ಪ್ರೌಢಶಾಲೆಗೆ ಭೇಟಿ ನೀಡುತ್ತಿದ್ದರು. ಅದರಲ್ಲಿಯೇ ತಿಳಿಯಬಹುದು ಶ್ರೀಗಳಿಗೆ ಶಿಕ್ಷಣದ ಮೇಲೆ ಎಷ್ಟು ಪ್ರೀತಿ ಇತ್ತು ಎಂಬುದನ್ನು ಎಂದು ನೆನೆಸಿಕೊಂಡರು.
ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ್ದು ರಾಮಾಯಣ ಮತ್ತು ಮಹಾಭಾರತ ಕಾವ್ಯಗಳು. ರಾಮಾಯಣ ರಚಿಸಿರುವ ವಾಲ್ಮೀಕಿ ಅವರ ಜಯಂತಿ ಇಂದು. ಬದುಕಿಗೆ ಬೇಕಾದ ಅನೇಕ ಮಾರ್ಗ ದರ್ಶನಗಳನ್ನು ವಾಲ್ಮೀಕಿ ಮಹರ್ಷಿಗಳು ರಾಮಾಯಣದ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ರಾಮಾಯಣದಲ್ಲಿನ ಸ್ವಾರಸ್ಯ ತಿಳಿಸಿದರು.