ತುಮಕೂರು: ಪರಿಶಿಷ್ಟರಿಗಾಗಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮೀಸಲಿಟ್ಟಿರುವ ಹಣ ದುರುಪಯೋಗವಾಗಿದೆ ಎಂದು ಸಭೆಯಲ್ಲಿ ಆರೋಪ ಕೇಳಿಬಂದ ಕಾರಣ ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ತಿಳಿಸಿದರು.
ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದ ಹಿತರಕ್ಷಣಾ ಹಾಗೂ ಕುಂದುಕೊರತೆ ಸಮಿತಿ ಸಭೆ ನಡೆಸಲಾಯಿತು. ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆರಂಭವಾಗಿದ್ದು, ದೇವರಾಯನದುರ್ಗ ಮತ್ತು ಯಡಿಯೂರಿನಲ್ಲಿ ಮುಕ್ತ ಅವಕಾಶವಿದ್ದರೂ ಗರ್ಭಗುಡಿ ಪ್ರವೇಶಿಸುವುದಕ್ಕೆ ಕಡಿವಾಣವನ್ನು ಹಾಕಲಾಗುತ್ತಿದೆ ಎಂಬ ವಿಷಯದ ಬಗ್ಗೆ ಸಭೆಯಲ್ಲಿ ಹೆಚ್ಚು ಚರ್ಚೆ ನಡೆಯಿತು.
ಇದೇ ವೇಳೆ ರಾಜ್ಯ ಮಾದಿಗರ ಸಂಘಟನೆಗಳ ಸ್ವಾಭಿಮಾನದ ಒಕ್ಕೂಟದ ಅಧ್ಯಕ್ಷ ಕೇಶವಮೂರ್ತಿ, ಸಿದ್ದರ ಬೆಟ್ಟದ ಬಳಿಯಿರುವ ಪುರಂದರ ರಾಯರ ಬೆಟ್ಟಕ್ಕೆ ದಲಿತ ಜನಾಂಗದ ಇತಿಹಾಸವಿದೆ. ಆದರೆ ಅಲ್ಲಿರುವ ಮೂರೂವರೆ ಎಕರೆ ಭೂಮಿಯಲ್ಲಿ ಸಮಾಧಿಗಾಗಿ ಬಳಸಲಾಗುತ್ತಿದೆ ಮತ್ತು ಅದರ ಸುತ್ತಲಿನ ಜಾಗ ಒತ್ತುವರಿಯಾಗಿದೆ. ನಾವು ಇದನ್ನ ಪ್ರಶ್ನಿಸಿದರೆ ಈ ಜಾಗವನ್ನು ತಹಶೀಲ್ದಾರ್ ಅವರಿಂದ ಮಂಜೂರು ಮಾಡಿಸಿಕೊಂಡು ಬಂದಿದ್ದೇವೆ ಎಂದು ದಾಸೋಹ ಸಮಿತಿಯವರು ಹೇಳಿ ನಮಗೆ ಅಲ್ಲಿ ಪೂಜೆ ಧ್ಯಾನ ಭಜನೆ ಮಾಡಲು ಬಿಡುತ್ತಿಲ್ಲ. ಹಾಗಾಗಿ ನಮ್ಮ ಸಮಾಜದ ರಕ್ಷಣೆ ಮಾಡುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಡಿಸಿಗೆ ಮನವಿ ಪತ್ರ ಸಲ್ಲಿಸಿದರು.