ತುಮಕೂರು/ರಾಮನಗರ: ಉತ್ತರ ಪ್ರದೇಶದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಪ್ರಿಯಾಂಕಾ ಗಾಂಧಿ ಹೋಗಿದ್ದರು. ಅದಕ್ಕೂ ಕೂಡ ಅಲ್ಲಿನ ಬಿಜೆಪಿ ಸರ್ಕಾರ ಅವಕಾಶ ನೀಡಿಲ್ಲ. ಅಲ್ಲದೇ ಪ್ರಿಯಾಂಕಾ ಗಾಂಧಿ ಬಂಧನ ಕಾನೂನು ಬಾಹಿರ. ಬಂಧಿಸಿದ 24 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು. ಅದನ್ನು ಕೂಡ ಉತ್ತರ ಪ್ರದೇಶ ಸರ್ಕಾರ ಮಾಡಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಕುರಿತು ಎಐಸಿಸಿ ಕಾನೂನು ಘಟಕ ಇದನ್ನು ಯಾವ ರೀತಿ ತೆಗೆದುಕೊಳ್ಳಬೇಕು ಎಂದು ಪರಿಶೀಲಿಸುತ್ತಿದೆ. ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಪ್ರಿಯಾಂಕಾ ಗಾಂಧಿ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಬಹುದು. ಅಲ್ಲಿ ಏನು ಬೇಕಾದರೂ ಸರ್ಕಾರ ಹೇಳಬಹುದಾಗಿದೆ. ಆದರೆ ಅದನ್ನು ನ್ಯಾಯಾಲಯ ಯಾವ ರೀತಿ ಪರಿಗಣಿಸಲಿದೆ ಎಂಬುದು ಮುಂದಿನ ಹೆಜ್ಜೆಯಾಗಿ ಇರುತ್ತದೆ ಎಂದರು.
ವಿರೋಧ ಪಕ್ಷಗಳ ಅಗತ್ಯವಿಲ್ಲ:
ಭಾರತೀಯ ಜನತಾ ಪಕ್ಷಕ್ಕೆ ವಿರೋಧ ಪಕ್ಷಗಳ ಅಗತ್ಯವಿಲ್ಲ. ಅವರು ಮಾಡಿದ್ದನ್ನು ಪ್ರಶ್ನೆ ಮಾಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಇರಲು ಸಂವಿಧಾನದಲ್ಲಿ ಅವಕಾಶವಿದೆ. ಪ್ರತಿಭಟನೆ ಮಾಡಲು ಹಕ್ಕಿದೆ. ಯಾವುದೇ ತಪ್ಪು ಆಗಿದ್ದರೆ ಅದನ್ನು ಪ್ರಶ್ನಿಸುವ ಹಕ್ಕು ಸಂವಿಧಾನದಲ್ಲಿ ನೀಡಲಾಗಿದೆ. ಬಿಜೆಪಿಗೆ ಇದರಲ್ಲಿ ನಂಬಿಕೆ ಇಲ್ಲ ಎಂದರು.
ಪ್ರಿಯಾಂಕಾ ಗಾಂಧಿ ಅವರನ್ನು ಹತ್ತಿಕ್ಕುವ ಪ್ರಯತ್ನ:
ಭಾರತೀಯ ಜನತಾ ಪಕ್ಷದ ರೈಲು ಕೆಳಗೆ ಹೋಗುತ್ತಿದೆ. ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಹ ಯಾವುದೇ ಸೂಚನೆಗಳಿಲ್ಲ. ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಅವರು ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಹತ್ತಿಕ್ಕುವ ಪ್ರಯತ್ನ ಬಿಜೆಪಿಯಿಂದ ನಡೆಯುತ್ತಿದೆ ಎಂದು ಆರೋಪಿಸಿದರು
ಕೇಂದ್ರದ ವಿರುದ್ಧ ಎಂಎಲ್‌ಸಿ ಸಿ.ಎಂ.ಲಿಂಗಪ್ಪ ಕಿಡಿ:
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಗೃಹ ಬಂಧನ ಹಿನ್ನೆಲೆ ಎಂಎಲ್‌ಸಿ ಸಿ.ಎಂ.ಲಿಂಗಪ್ಪ ಕೇಂದ್ರ ಸರ್ಕಾರದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಅಕ್ಟೊಬರ್ 8ರ ಸಂಜೆ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗುವುದು. ಮುಗ್ಧ ರೈತರ ಮೇಲೆ ಕೇಂದ್ರ ಮಂತ್ರಿ ಅಜಯ್ ಮಿಶ್ರಾ ಮಗ ದೌರ್ಜನ್ಯ ನಡೆಸಿದ್ದಾರೆ.
ಬ್ರಿಟಿಷರು ನಡೆಸಿದ್ದ, ಜಲಿಯನ್ ವಾಲಾಬಾಗ್ ದುರಂತ ಬಿಟ್ಟರೆ, ಯುಪಿಯಲ್ಲಿ ರೈತರ ಮೇಲೆ ಹತ್ಯಾಕಾಂಡ ನಡೆದಿದೆ. ಉತ್ತರ ಪ್ರದೇಶ ನಾಯಕರು, ಸಂಸದರಿಗೆ ಸಂಸ್ಕತಿ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಮೂರು ತಲೆಮಾರು ಕಳೆದಿದ್ದರೂ ಹೀನ ಕೃತ್ಯಗಳು ನಡೆಯುತ್ತಿವೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ ಎಂದು ವಾಗ್ಧಾಳಿ ನಡೆಸಿದರು.
ಹೆಚ್ಡಿಕೆ ವಿರುದ್ಧ ವಾಗ್ದಾಳಿ:
ಮಾಜಿ ಸಿಎಂ ಕುಮಾರಸ್ವಾಮಿ ಅವರದ್ದು ಹಿಟ್ ಅಂಡ್ ರನ್ ಕೇಸ್ ಆಗಿದೆ. ಅವರು ಯಾವುದಕ್ಕೂ ಸಿಗುವುದಿಲ್ಲ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಹೇಳಿರಲಿಲ್ಲವೇ ಎಂದು ಲಿಂಗಪ್ಪ ಪ್ರಶ್ನಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ಸಂದರ್ಭದಲ್ಲಿ ಸದನದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ರು. ಹೊರಗೆ ಮಾತ್ರ ಗೋಹತ್ಯೆ ನಿಷೇಧ ಕಾಯ್ದೆಗೆ ವಿರುದ್ಧ ಇದ್ದೇವೆ ಎಂದಿದ್ದರು. ಜೆಡಿಎಸ್ ನಿಜವಾಗಿಯೂ ಜಾತ್ಯತೀತತೆ ಹೊಂದಿದೆಯೇ? ಎಂದು ಹುಡುಬೇಕಿದೆ ಎಂದರು.
ಉಪ ಚುನಾವಣೆಗೆ ಎರಡೂ ಕ್ಷೇತ್ರಗಳಿಗೆ ಜೆಡಿಎಸ್ ವತಿಯಿಂದ ದುರ್ಬಲ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ. ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿ ಪರೋಕ್ಷವಾಗಿ ಬಿಜೆಪಿ ಬೆಂಬಲಿಸುತ್ತಿದೆ ಎಂದು ಲಿಂಗಪ್ಪ ವಾಗ್ದಾಳಿ ನಡೆಸಿದರು.