ತುಮಕೂರು: ಜಿಲ್ಲೆಯಲ್ಲಿ ನಡೆದ 2 ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಡಿಸೆಂಬರ್ 12ರಂದು ನಡೆದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಟ್ಟು 168 ಸ್ಥಾನಗಳಿಗೆ ಮತದಾನ ನಡೆದಿತ್ತು. ಅದರಲ್ಲಿ 1359 ಮತಗಟ್ಟೆಗಳ ಪೈಕಿ 1303ರಲ್ಲಿ ಮತದಾನ ಪ್ರಕ್ರಿಯೆ ನಡೆದಿತ್ತು. 8,77,232 ಮತದಾರರ ಪೈಕಿ 7,74,549 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 85.50ರಷ್ಟು ಮತದಾನವಾಗಿದೆ.
ಕುಣಿಗಲ್ ತಾಲೂಕಿನಲ್ಲಿ ಅತಿ ಹೆಚ್ಚು ಶೇ. 91.56ರಷ್ಟು ಮತದಾನವಾಗಿತ್ತು. ಅಲ್ಲದೆ ತುಮಕೂರು ತಾಲೂಕಿನಲ್ಲಿ ಅತೀ ಕಡಿಮೆ 86.17ರಷ್ಟು ಮತದಾನವಾಗಿತ್ತು. 396157 ಮಂದಿ ಪುರುಷ ಮತದಾರರು ಮತ ಚಲಾಯಿಸಿದ್ದರೆ, 3,78,386 ಮಹಿಳಾ ಮತದಾರರು ಮತ ಚಲಾವಣೆ ಮಾಡಿದ್ದರು. ಮೊದಲ ಹಂತದಲ್ಲಿ ತುಮಕೂರು, ಕುಣಿಗಲ್, ಕೊರಟಗೆರೆ, ಗುಬ್ಬಿ, ಪಾವಗಡ ತಾಲೂಕಿನಲ್ಲಿ ಚುನಾವಣೆ ನಡೆದಿತ್ತು.
ಓದಿ-ಮೋದಿ ಗತ್ತು, ಸೀತಾರಾಮನ್ ತಾಕತ್ತು: ಪೇಟೆಗೆ ಬಂತು ಲಕ್ಷಾಂತರ ಕೋಟಿ ರೂ. ಸಂಪತ್ತು
ಡಿಸೆಂಬರ್ 27ರಂದು ನಡೆದಿದ್ದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 797825 ಮತದಾರರ ಪೈಕಿ 7,15,288 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಅದರಲ್ಲಿ ಪುರುಷ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದರು. 3,65,999 ಪುರುಷರು ಮತದಾನ ಮಾಡಿದ್ದರೆ, 3,49286 ಮಹಿಳಾ ಮತದಾರರು ಮತ ಚಲಾವಣೆ ಮಾಡಿದ್ದರು.
ಒಟ್ಟು 1321 ಮತಗಟ್ಟೆಗಳ ಪೈಕಿ 1268 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಶಿರಾ ತಾಲೂಕಿನಲ್ಲಿ ಅತಿ ಹೆಚ್ಚು ಶೇ. 90.89ರಷ್ಟು ಮತದಾನವಾಗಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅತೀ ಕಡಿಮೆ 88.54ರಷ್ಟು ಮತದಾನವಾಗಿತ್ತು.