ತುಮಕೂರು : ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಮಧುಗಿರಿಯ ಏಕಶಿಲಾ ಶಿಖರಕ್ಕೆ ಕೇಬಲ್ ಕಾರ್ ಸೇವೆ ಆರಂಭಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ನನೆಗುದಿಗೆ ಬಿದ್ದಿದೆ.
ವೀಕೆಂಡ್ ಬಂದ್ರೆ ನೂರಾರು ಮಂದಿ ಸಾಹಸಿಗಳು ಮಧುಗಿರಿ ಏಕಶಿಲಾ ಬೆಟ್ಟದತ್ತ ಮುಖ ಮಾಡುತ್ತಾರೆ. ಸಾವಿರಾರು ಅಡಿ ಎತ್ತರದ ಬೆಟ್ಟವನ್ನು ಹತ್ತುವ ಮೂಲಕ ಸಾಹಸ ಪ್ರದರ್ಶನದಲ್ಲಿ ತೊಡಗುತ್ತಾರೆ. ಬೆಟ್ಟ ಹತ್ತುವ ವೇಳೆ ಅನೇಕ ಮಂದಿ ಕಾಲುಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ, ಕೇಬಲ್ ಕಾರ್ ಸೇವೆ ಪ್ರಾರಂಭಿಸುವುದರಿಂದ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡುವ ಜೊತೆಗೆ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಪ್ರವಾಸೋದ್ಯಮ ಇಲಾಖೆ 4 ರಿಂದ 5 ಎಕರೆ ಭೂಮಿ ನೀಡುವಂತೆ ಕೋರಲಾಗಿತ್ತು.
ಪ್ರವಾಸೋದ್ಯಮ ಇಲಾಖೆ 8 ಬಾರಿ ಪುರಾತತ್ವ ಇಲಾಖೆ ಜತೆ ಪತ್ರ ವಿನಿಮಯ ಮಾಡಿದರೂ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ. ಕಂದಾಯ, ಅರಣ್ಯ ಇಲಾಖೆ ಜಂಟಿಯಾಗಿ ಸರ್ವೇ ನಡೆಸಬೇಕಿದ್ದರೂ ಅಧಿಕಾರಿಗಳು ನಿಲರ್ಕ್ಷ್ಯವಹಿಸಿದ್ದಾರೆ ಎನ್ನಲಾಗಿದೆ. 2015ರ ಜೂನ್ 10ರಂದು ಮುಂಬೈ ಮೂಲದ ಸಂಸ್ಥೆಯೊಂದು ರೋಪ್ ವೇ ಅಳವಡಿಸುವ ಸಂಬಂಧ ಸರ್ಕಾರಕ್ಕೆ ವರದಿ ನೀಡಿತ್ತು.
ಈ ಸಂಬಂಧ ವಿಸ್ತೃತ ಯೋಜನಾ ವರದಿ ಅಥವಾ ನೀಲನಕ್ಷೆ ತಯಾರಿಸಿ ಕೊಡುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ವರದಿಯನ್ನು ದೆಹಲಿಯ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗುವುದು. ಅನುಮತಿ ದೊರೆತರೆ ಕಾಮಗಾರಿ ಆರಂಭಿಸಬಹುದು ಎಂಬುದು ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿ ಕೈ ತೊಳೆದುಕೊಂಡಿದ್ದಾರೆ.
ಏಕಶಿಲಾ ಬೆಟ್ಟ ಹಾಗೂ ಅದರ ಸುತ್ತಲಿನ 300 ಮೀಟರ್ ಜಾಗ ಭಾರತೀಯ ಪುರಾತತ್ವ ಇಲಾಖೆಗೆ ಸೇರಿದೆ. ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡುವಂತಿಲ್ಲ. 100 ಮೀಟರ್ ವ್ಯಾಪಿಯ ಪ್ರದೇಶ ನಿಷೇಧಿತ ವಲಯವಾಗಿದೆ. 200 ಮೀಟರ್ ಪ್ರದೇಶಕ್ಕೆ ಷರತ್ತು ಬದ್ಧ ಅನುಮತಿ ಇದೆ. ಇನ್ನು, 300 ಮೀಟರ್ ಮೀರಿದ ಭೂಮಿ ಅರಣ್ಯ ಹಾಗೂ ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಭೂಮಿ ಹಸ್ತಾಂತರ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.
ಕೇಬಲ್ ಕಾರ್ ಅಳವಡಿಸುವ ಸಂಬಂಧ ಪರಿಶೀಲನೆ ನಡೆಸಿ ಕೋಲ್ಕತಾದ ತಾಂತ್ರಿಕ ಪರಿಣಿತರ ತಂಡ ಸರ್ಕಾರಕ್ಕೆ ವರದಿ ನೀಡಿದೆ. ಮಧುಗಿರಿ ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ನ್ಯಾಯಾಲಯ ಸಂಕೀರ್ಣದ ಸಮೀಪದಿಂದ ಏಕಶಿಲಾ ಬೆಟ್ಟದ ಮೇಲಿನ ನವಿಲು ದೋಣಿಯವರೆಗೆ ರೋಪ್ ವೇ ಅಳವಡಿಸುವುದು ಸೂಕ್ತ ಸ್ಥಳವೆಂದು ತಂಡವು ವರದಿ ನೀಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದ್ದ ಕೇಬಲ್ ಕಾರ್ ಅವಳಡಿಕೆಗೆ ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸ ಬೇಕಿದೆ.