ತುಮಕೂರು : ಜಿಲ್ಲೆಯ ಜನರಲ್ಲಿ ಪರಿಸರ ಸಂರಕ್ಷಣೆಯ ಕಾಳಜಿ ಮೂಡಿಸುವ ಉದ್ದೇಶದಿಂದ ವಿಭಿನ್ನವಾದ ಅಭಿಯಾನವೊಂದು ಸದ್ದಿಲ್ಲದೆ ಸಾಗಿದೆ. ಅದ್ರಲ್ಲೂ ಹುಟ್ಟುವ ಮಕ್ಕಳ ಪೋಷಕರಿಗೆ ಸಸಿಗಳನ್ನು ಕೊಟ್ಟು ಮಕ್ಕಳಂತೆ ಸಸಿ ನೆಟ್ಟು ಪೋಷಣೆ ಮಾಡುವ ಕಾಳಜಿ ಮೂಡಿಸಲಾಗುತ್ತಿದೆ.
ಹೀಗೆ 'ಮಗುವಿಗೊಂದು ಸಸಿ' ಅಭಿಯಾನದೊಂದಿಗೆ ಪರಿಸರದ ಕಾಳಜಿಯನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿರುವುದು ತುಮಕೂರಿನ ಶ್ರೀ ಸಿದ್ದವೀರಪ್ಪ ಹಾಗೂ ಪಾರ್ವತಮ್ಮ ಪ್ರತಿಷ್ಠಾನ. ಮಗುವಿಗೆ ಒಳ್ಳೆಯ ಪರಿಸರ ಲಭಿಸಬೇಕು ಎಂಬ ಉದ್ದೇಶದೊಂದಿಗೆ ಪ್ರತಿಷ್ಠಾನದ ವತಿಯಿಂದ ತುಮಕೂರು ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹುಟ್ಟುವ ಶಿಶುಗಳ ಪೋಷಕರಿಗೆ ಉಚಿತವಾಗಿ ಸಸಿಗಳನ್ನು ನೀಡಲಾಗುತ್ತಿದೆ.
ಇದಕ್ಕೆ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ಕೂಡ ದೊರೆಯುತ್ತಿದೆ. ಪರಿಸರಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂಬ ಅಭಿಲಾಷೆ ಹೊಂದಲಾಗಿದ್ದು, ಮಗುವನ್ನು ಪೋಷಣೆ ಮಾಡಿದಂತೆ ಪೋಷಕರು ಸಸಿಯನ್ನು ಬೆಳೆಸುವಂತೆ ಕರೆ ನೀಡಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ವೃಕ್ಷಾಭಿವೃದ್ಧಿ ಆಗಬೇಕೆಂಬ ಮಹತ್ವದ ಉದ್ದೇಶದಿಂದ ಹಾಗೂ ಭವಿಷ್ಯದಲ್ಲಿ ಪರಿಸರ ಸಮೃದ್ಧಿಯಾಗಿರಬೇಕು ಎಂಬ ಉತ್ತಮ ಚಿಂತನೆಯೊಂದಿಗೆ ಮುನ್ನುಡಿ ಇಟ್ಟಿರೋ ಪ್ರತಿಷ್ಠಾನದ ಕೆಲಸ, ದೇಶದಲ್ಲಿ ಆಂದೋಲನದ ರೀತಿ ಜಾರಿಗೆ ಬರಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸುಮಲತಾ ಅಕ್ಕ ಬನ್ನಿ.. ಅಕ್ರಮ ಗಣಿಗಾರಿಕೆ ನಿಲ್ಲಿಸಿ.. ಸಂಸದೆಗೆ ಸುರೇಶ್ಗೌಡ ಆಹ್ವಾನ