ತುಮಕೂರು: ನಾನು ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹೇಳಿರುವುದಾಗಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (former DCM Dr. G Parameshwar ) ತಿಳಿಸಿದ್ದಾರೆ.
ನಗರದ ಗುಬ್ಬಿ ವೀರಣ್ಣ ಕಲಾ ಕ್ಷೆತ್ರದಲ್ಲಿ ಭಾನುವಾರ ಜರುಗಿದ ಛಲವಾದಿ ಸಾಂಸ್ಕೃತಿಕ ವೇದಿಕೆಯಿಂದ ನಡೆದ 'ಒನಕೆ ಓಬವ್ವ ಜಯಂತಿ' (Onake Obavva Jayanthi) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಮೂರು ತಿಂಗಳ ಹಿಂದೆ ಮುಂದಿನ ದಿನಗಳಲ್ಲಿ ದಲಿತರು ಸಿಎಂ ಆಗಬೇಕು ಎಂಬ ಬೇಡಿಕೆ ಬಂದರೂ ಬರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೆ.
ಇದಕ್ಕೆ ರಾಹುಲ್ ಗಾಂಧಿ(Rahul Gandhi) ನನ್ನ ಬಳಿ ಸ್ಪಷ್ಟನೆ ಕೇಳಿದ್ದರು ಎಂದರು. ನಾನು ಮುಖ್ಯಮಂತ್ರಿ ಆಗ್ತಿನೊ, ಇಲ್ವೋ ಗೊತ್ತಿಲ್ಲ. ಆದ್ರೆ ಹೇಳಿಕೆ ನಂತರ ದಲಿತ ಸಿಎಂ ಚರ್ಚೆ ತೀವ್ರವಾಗಿ ನಡೆಯುತ್ತಿದೆ. ಅದೃಷ್ಟದ ತಾಯಿ ಯಾರಿಗೆ ಒಲಿಯುತ್ತಾಳೆ ಎಂಬುದನ್ನು ಕಾದು ನೋಡೋಣ ಎಂದರು.
ಮುಂದಿನ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. ಅಲ್ಲದೇ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕಿತ್ತಾಡಿಕೊಂಡಿರುವ ಉದಾಹರಣೆಗಳಿವೆ. ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಕಾಂಗ್ರೆಸ್‌ನ ಮುಂದಿನ ಸಿಎಂ ವಿಚಾರಕ್ಕೆ ಖುದ್ದು ಹೈಕಮಾಂಡ್ ಮಧ್ಯಪ್ರವೇಶಿಸಿ ತೆರೆ ಎಳೆದಿತ್ತು.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ನೆನೆದು ಭಾವುಕರಾದ ರಮೇಶ್ ಜಾರಕಿಹೊಳಿ