ತುಮಕೂರು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟಿಸುವ ಅಪಘಾತಗಳನ್ನು ತಡೆಗಟ್ಟಲು ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳುತ್ತಿದೆಯಾದರೂ, ಇದನ್ನು ನಿಭಾಯಿಸಲು ಎನ್ಜಿಒಗಳಿಗೆ ವಹಿಸಲಾಗಿದೆ. ಅವರು ಸೂಕ್ತ ಕ್ರಮ ಕೈಗೊಳ್ಳದೇ ಇರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಮಾಜಿ ಸಂಸದ ಬಿಎನ್ ಚಂದ್ರಪ್ಪ ಹೇಳಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ಸ್ಥಳಕ್ಕೆ ತೆರಳಿ ಸ್ಪಂದಿಸುವ ಕೆಲಸ ಎನ್ಜಿಒಗಳು ಮಾಡುತ್ತಿಲ್ಲ. ಅಲ್ಲದೆ ಅಪಘಾತಗಳು ಸಂಭವಿಸದಂತೆ ಮುಂಜಾಗ್ರತೆ ಕ್ರಮಗಳನ್ನು ವಹಿಸುತ್ತಿಲ್ಲ ಎಂದು ದೂರಿದರು.
ಅಪಘಾತಗಳ ಪ್ರಮಾಣ ಕಡಿಮೆಗೊಳಿಸಲು ಎನ್ಜಿಒಗಳಿಗೆ ಹೆದ್ದಾರಿ ಪ್ರಾಧಿಕಾರ ಅಪಾರ ಹಣ ವಿನಿಯೋಗಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಪ್ರಯೋಜನಕ್ಕೆ ಬಾರದಂತಾಗಿದೆ. ಹೀಗಾಗಿ ಪ್ರಾಧಿಕಾರವು ಅಂತಹ ಎನ್ಜಿಒಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ಆಗ ಮಾತ್ರ ಅಪಘಾತಗಳ ಪ್ರಮಾಣ ಕ್ಷೀಣಿಸಲಿದೆ ಎಂದು ಸಲಹೆ ಕೊಟ್ಟರು.