ತುಮಕೂರು: ತುಮಕೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಳ್ಳಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯ ವ್ಯಾಪ್ತಿಯಲ್ಲೂ ಭಾರಿ ಮಳೆಯಾಗುತ್ತಿದ್ದು ಜಲಾಶಯದ ಒಳಹರಿವು 3,200 ಕ್ಯೂಸೆಕ್ ಇದೆ. ಇಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.
ಶಿರಾ ತಾಲೂಕಿನ ಯಾದಲಡಕು ಗ್ರಾಮದಲ್ಲಿ ಕೆರೆ ಕಟ್ಟೆ ಒಡೆದು ಹೋಗಿದೆ. ಸಮೀಪದ ಹೊಲಗದ್ದೆಗಳಿಗೆ ನೀರು ನುಗ್ಗಿ ಸಾಕಷ್ಟು ನಷ್ಟ ಉಂಟಾಗಿದೆ. ಬಹುತೇಕ ಎಲ್ಲ ಚೆಕ್ ಡ್ಯಾಮ್ಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಈ ದೃಶ್ಯಗಳನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ. 20ಕ್ಕೂ ಅಧಿಕ ಮನೆಗಳು ಕುಸಿದಿವೆ. ಶಿಥಿಲಾವಸ್ಥೆ ತಲುಪಿದ 5ಕ್ಕೂ ಹೆಚ್ಚು ಶಾಲೆಗಳಿಗೆ ಹಾನಿಯಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಅಬ್ಬರ: ದಾವಣಗೆರೆ, ಶಿವಮೊಗ್ಗ, ಧಾರವಾಡ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ
ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದ್ದು, ಅಚ್ಚುಕಟ್ಟು ಪ್ರದೇಶ, ಶಿಂಷಾ ನದಿಪಾತ್ರದ ರೈತರು ಎಚ್ಚರವಹಿಸುವಂತೆ ತಾಲೂಕಾಡಳಿತ ತಿಳಿಸಿದೆ. ಮಾರ್ಕೋನಹಳ್ಳಿ, ಹನುಮಾಪುರ, ಕೆ.ಟಿ.ಪಾಳ್ಯ, ಬೆಟ್ಟಹಳ್ಳಿ, ಪಡುವಗೆರೆ, ಕೊಡವತ್ತಿ, ಕೀಲಾರ, ಅಂಚೀಪುರ, ದೊಡ್ಡಕಲ್ಲಹಳ್ಳಿ, ಎಡವಾಣಿ, ಕಗ್ಗಲ್ಲೀಪುರ, ಶ್ಯಾನುಭೋಗನಹಳ್ಳಿ, ವಳಗೆರೆಪುರ ಹಾಗೂ ಕಾಡಶೆಟ್ಟಿಹಳ್ಳಿ ಗ್ರಾಮಸ್ಥರು ಜಲಾಶಯದ ಬಳಿ ತೆರಳದಂತೆ ತಹಶೀಲ್ದಾರ್ ಮಹಬಲೇಶ್ವರ ಮನವಿ ಮಾಡಿದ್ದಾರೆ.