ತುಮಕೂರು: ಜಿಲ್ಲೆಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆ ಮತ್ತು ಪಟ್ಟಣ ವ್ಯಾಪಾರ ಸಮಿತಿಗೆ ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಜ್ಯೋತಿಗಣೇಶ್, ಬೀದಿಬದಿ ವ್ಯಾಪಾರಿಗಳ ಜೊತೆ ಸರ್ಕಾರ ಸದಾ ಇರುತ್ತದೆ. ನಿಮಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಬೀದಿಬದಿ ವ್ಯಾಪಾರಿಗಳನ್ನು ಏಕಾಏಕಿ ಎತ್ತಿಸುವಂತಹ ಕೆಲಸ ಮಹಾನಗರ ಪಾಲಿಕೆಯಾಗಲಿ, ಸರ್ಕಾರವಾಗಲಿ ಮಾಡುವುದಿಲ್ಲ. ಟ್ರಾಫಿಕ್ ಸಮಸ್ಯೆ ಉಂಟಾದ ಸಂದರ್ಭದಲ್ಲಿ, ಹೆಚ್ಚು ಜನರ ಓಡಾಡುವಂತಹ ಸ್ಥಳಗಳಲ್ಲಿ ಮೊದಲು ಮಹಾನಗರ ಪಾಲಿಕೆ ವತಿಯಿಂದ ಸೂಚನೆ ನೀಡಲಾಗುವುದು. ತದನಂತರ ಅದೇ ರೀತಿ ಮುಂದುವರೆದರೆ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳು ನಿಮ್ಮ ವಿರುದ್ಧವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದರು.
ತುಮಕೂರು ನಗರದಲ್ಲಿ ಬೀದಿಬದಿ ವ್ಯಾಪಾರ ಮಾಡುವ ಜನರಿಗಾಗಿ ಒಂದು ಸ್ಥಳವನ್ನು ನಿಗದಿ ಮಾಡಲಾಗುತ್ತದೆ. ಅದರಲ್ಲಿ ಮೊದಲನೇಯದಾಗಿ ಟೌನ್ ಹಾಲ್ ಹತ್ತಿರ, ತದನಂತರ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಕೋತಿ ತೋಪಿಗೆ ಹೋಗುವ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಸ್ಥಳ ನೀಡಲಾಗುವುದು. ಇದರ ಜೊತೆಗೆ ಆ ಸ್ಥಳಗಳಲ್ಲಿನ ಶುಚಿತ್ವವನ್ನು ಅಲ್ಲಿನ ಬೀದಿಬದಿ ವ್ಯಾಪಾರಿಗಳು ಮಾಡಬೇಕು ಎಂದು ಸಲಹೆ ನೀಡಿದರು.