ತುಮಕೂರು : ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಜಿಲ್ಲೆಯ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಂದು ಕೂಡ ಹಲವೆಡೆ ತುಂತುರು ಮಳೆ ಮುಂದುವರಿದಿದೆ. ಕೆಲವೆಡೆ ಕೆರೆಕಟ್ಟೆಗಳು ಒಡೆದು ಕೃಷಿ ಭೂಮಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ.
ಕೊರಟಗೆರೆ ತಾಲೂಕಿನ ನವಿಲುಕುರಿಕೆ ಕೆರೆ ಏರಿ ಒಡೆದಿದೆ. 50ಕ್ಕೂ ಹೆಚ್ಚು ರೈತ ಕುಟುಂಬ ಬೆಳೆದಿರುವ 128 ಎಕರೆಗೂ ಅಧಿಕ ಪ್ರದೇಶದಲ್ಲಿದ್ದ ಭತ್ತದ ಬೆಳೆಯು ಕೆರೆಯ ನೀರಿನಲ್ಲಿ ಮುಳುಗಿ ಮೊಳಕೆ ಒಡೆದಿದೆ.
ಹಿರೇಹಳ್ಳಿಯಲ್ಲಿ ಅತಿ ಹೆಚ್ಚು 102 ಮಿಲಿಮೀಟರ್ ಮಳೆಯಾಗಿದೆ. ತುರುವೇಕೆರೆ ತಾಲೂಕಿನಲ್ಲಿ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದ್ದು, ಹಲವು ಮನೆಗಳು ಬಿರುಕು ಬಿಟ್ಟಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಪಾವಗಡ ತಾಲೂಕಿನ ಗೂಂಡಾರ್ಲಹಳ್ಳಿ ಕೆರೆಕಟ್ಟೆ ಒಡೆದು ಅಪಾರ ನೀರು ಹೊರಹೋಗಿದೆ. ಮಧುಗಿರಿ ತಾಲೂಕಿನ ಲಕ್ಕಿ ಹಟ್ಟಿ ಗ್ರಾಮದ ಸೇತುವೆ ಹಾಳಾಗಿದೆ. ಶಿರಾ ತಾಲೂಕಿನಲ್ಲಿ ಯಾದಲಡುಕು ಕೆರೆಯೇರಿ ಕೂಡ ಒಡೆದಿದೆ.
ಇದನ್ನೂ ಓದಿ: ವಿಜಯನಗರ : ಪ್ರವಾಹವನ್ನು ಲೆಕ್ಕಿಸದೇ ಬಸ್ ಚಾಲನೆ