ತುಮಕೂರು: ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಬಿಟ್ಕಾಯಿನ್ (Bitcoin case) ಹಗರಣದಲ್ಲಿ ಸಿಎಂ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡುತ್ತಿರುವ ಹೊತ್ತಲ್ಲೇ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಬಿಟ್ಕಾಯಿನ್ ಹಗರಣದಲ್ಲಿ ಸಿಎಂ ಪಾತ್ರ ಏನೂ ಇಲ್ಲ ಎಂದು ಹೇಳುವ ಮೂಲಕ ಬೊಮ್ಮಾಯಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ತುಮಕೂರಿನಲ್ಲಿ ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿರುವ ರಾಜಣ್ಣ, ಬಿಟ್ಕಾಯಿನ್ ದಂಧೆಯಂತಹ ನೀಚ ಕೃತ್ಯಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೈ ಹಾಕುವ ವ್ಯಕ್ತಿ ಅಲ್ಲ. ಅಂತಹ ಕೆಲಸಕ್ಕೂ ಪ್ರೋತ್ಸಾಹ ಕೊಡುವಂತಹ ವ್ಯಕ್ತಿಯೂ ಅಲ್ಲ ಎಂದು ಹೇಳಿದರು. ಸಿಎಂ ಬಗ್ಗೆ ನನಗೆ ಗೊತ್ತಿರುವುದರಿಂದ ಇದನ್ನು ಹೇಳುತ್ತಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಬಸವರಾಜ್ ಬೊಮ್ಮಾಯಿ ಅವರ ಕಡೆ ಇರುವವರು ಇವರ ಹೆಸರನ್ನು ದುರುಪಯೋಗ ಮಾಡಿಕೊಂಡಿರಬಹುದು. ಅಧಿಕಾರದಲ್ಲಿ ಇರುವವರಿಗೆ ಇದೆಲ್ಲಾ ಸರ್ವೇ ಸಾಮಾನ್ಯ. ಅವರ ಜೊತೆಗೆ ಇದ್ದವರು ತಪ್ಪು ಮಾಡಿದ್ದರೆ, ಸಿಎಂ ಅವರನ್ನು ನೇರವಾಗಿ ಹೊಣೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಹಗರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಪ್ರಕರಣದಲ್ಲಿ ದೊಡ್ಡವರಿರಲಿ, ಚಿಕ್ಕವರಿರಲಿ ಶಿಕ್ಷೆ ಆಗಲೇಬೇಕು. ಆಗ ಮಾತ್ರ ಸರ್ಕಾರಕ್ಕೆ ಕೀರ್ತಿ ಬರೋದು. ಬಿಟ್ ಕಾಯಿನ್ ದಂಧೆಯಲ್ಲಿ ಭಾಗಿಯಾದವರಿಗೆ ಶಿಕ್ಷೆ ಆಗದಿದ್ದರೆ ಸಮಾಜ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ದಂಧೆ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಜನರು ಮನೆ ಮಠ ಮಾರಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.