ತುಮಕೂರು : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಹಳೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಜಯರಾಮಯ್ಯ ದಾಳಿಗೆ ಒಳಗಾದ ರೈತ. ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಹಿಂಬದಿಯಿಂದ ದಾಳಿ ಮಾಡಿದ ಕರಡಿ, ಜಯರಾಮಯ್ಯ ಅವರ ಕಾಲನ್ನು ಕಚ್ಚಿ ಗಾಯಗೊಳಿಸಿದೆ.
ತೀವ್ರ ಗಾಯಗೊಂಡು ಕರಡಿ ದಾಳಿಯಿಂದ ಪ್ರಾಣ ರಕ್ಷಿಸಿಕೊಳ್ಳಲು ಕೂಗಾಟ ಚೀರಾಟದೊಂದಿಗೆ ಹರ ಸಾಹಸ ಪಡುತ್ತಿದ್ದ ಅವರನ್ನು ಕಂಡ ಪಕ್ಕದ ಜಮೀನಿನ ರೈತರು ಓಡಿ ಬಂದಿದ್ದಾರೆ. ನಂತರ ಕರಡಿಯನ್ನು ಓಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಜಯರಾಮಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.