ತುಮಕೂರು: ಸಾರ್ವಜನಿಕ ವಿದ್ಯಾರ್ಥಿ ನಿಲಯದ ಕುಡಿಯುವ ನೀರಿನ ಟ್ಯಾಂಕ್ಗೆ ವಿಷ ಹಾಕಲು ಯತ್ನಿಸಿದ್ದ ವ್ಯಕ್ತಿಗೆ 7 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ತಿಪಟೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
2018ರ ಜನವರಿ 18ರಂದು ಶ್ರೀನಿವಾಸ್ ಎಂಬಾತ ಹುಳಿಯಾರು ಹೋಬಳಿಯಲ್ಲಿರುವ ಗುರುವಾಪುರದ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಕುಡಿಯುವ ನೀರಿನ ಟ್ಯಾಂಕಿಗೆ ವಿಷ ಬೆರೆಸಲು ಪ್ರಯತ್ನಿಸಿದ್ದ. ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ಪೊಲೀಸರು ಈತನ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಬಿ.ಶಿವಕುಮಾರ್ ತೀರ್ಪು ನೀಡಿದ್ದಾರೆ.
ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಹೂವಿನ ಗಿಡದಲ್ಲಿ ನಿತ್ಯ ಹೂವು ಕೀಳಲು ಆರೋಪಿ ಶ್ರೀನಿವಾಸ್ ಹೋಗುತ್ತಿದ್ದನು. ಇದಕ್ಕೆ ಅಲ್ಲಿ ಕೆಲಸ ಮಾಡುತ್ತಿದ್ದ ಕರಿಯಮ್ಮ ಎಂಬುವರು ಹೂ ಕೀಳದಂತೆ ತಾಕೀತು ಮಾಡಿದ್ದರು. ಕರಿಯಮ್ಮ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹಾಗೂ ಅವರಿಗೆ ಕೆಟ್ಟ ಹೆಸರು ತರಲು ಶ್ರೀನಿವಾಸ್ ವಿದ್ಯಾರ್ಥಿ ನಿಲಯದ ಕುಡಿಯುವ ನೀರಿನ ಟ್ಯಾಂಕಿಗೆ ವಿಷ ಬೆರೆಸುವಂತೆ ಮತ್ತೊಬ್ಬ ವ್ಯಕ್ತಿಗೆ ಪುಸಲಾಯಿಸಿದ್ದ ಎಂಬುದು ಪ್ರಕರಣದ ವಿಚಾರಣೆಯಿಂದ ಬಹಿರಂಗವಾಗಿತ್ತು.
ಇದನ್ನೂ ಓದಿ: ರಾಮನಗರದಲ್ಲಿ ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ!