ಶಿವಮೊಗ್ಗ: ದೇವರ ಹೆಸರಿನಲ್ಲಿ ಬಿಟ್ಟಿದ್ದ ಮೂರು ರಾಸುಗಳು ಕಾಣೆಯಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮದಲ್ಲಿ ನಡೆದಿದೆ. ಅಬ್ಬಲಗೆರೆ ಗ್ರಾಮದ ಉಜ್ಜೆನೇಶ್ವರ, ಮರುಳುಸಿದ್ದೇಶ್ವರ ಹಾಗೂ ಗ್ರಾಮದ ಚೌಡೇಶ್ವರಿ ದೇವಿಯ ಹೆಸರಿನಲ್ಲಿ ಎರಡು ಹೋರಿ ಹಾಗೂ ಒಂದು ಹಸುವನ್ನು ಬಿಡಲಾಗಿತ್ತು. ಈ ಮೂರು ರಾಸುಗಳು ಕಳೆದ 10 ದಿನಗಳಿಂದ ಕಾಣೆಯಾಗಿವೆ. ರಾಸುಗಳು ಕಾಣೆಯಾಗಿರುವುದಕ್ಕೆ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಈ ಎಲ್ಲಾ ರಾಸುಗಳು ಕಳೆದ ಮೂರು ವರ್ಷದ ಹಿಂದೆ ಹೊಸದಾಗಿ ತಂದು ದೇವರ ಹೆಸರಿನಲ್ಲಿ ಬಿಡಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ದೇವರ ಹೆಸರಿನಲ್ಲಿ ಬಿಟ್ಟಿದ್ದ ಹೋರಿಗಳು: ಅಬ್ಬಲಗೆರೆಯ ಉಜ್ಜೇನೇಶ್ವರ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದೆ. ದೇವಾಲಯ ನಿರ್ಮಾಣವಾದಾಗಿನಿಂದಲೂ ಸಹ ದೇವರ ಹೆಸರಿನಲ್ಲಿ ಹೋರಿಗಳನ್ನು ಬಿಡುವುದು ಗ್ರಾಮದ ಪದ್ಧತಿಯಾಗಿ ನಡೆದುಕೊಂಡು ಬಂದಿದೆ. ಅದರಂತೆ ಅಬ್ಬಲಗೆರೆ ಗ್ರಾಮಸ್ಥರು ತಮ್ಮೂರಿನ ದೇವತೆಗಳ ಹೆಸರಿನಲ್ಲಿ ಎರಡು ಹೋರಿ ಹಾಗೂ ಒಂದು ಹಸುವನ್ನು ಬಿಡಲಾಗಿತ್ತು.
ಈ ರಾಸುಗಳು ಗ್ರಾಮದ ಪ್ರತಿ ಮನೆಗೂ ಬಂದು ಪೂಜೆ ಪಡೆದುಕೊಂಡು ಹೋಗುತ್ತಿದ್ದವು. ಗ್ರಾಮಸ್ಥರು ಸಹ ರಾಸುಗಳು ಮನೆ ಮನೆಗೆ ಬಂದಾಗ ಮನೆ ಒಳಗೆ ಬಿಟ್ಟುಕೊಂಡು ಪೂಜೆ ಸಲ್ಲಿಸಿ, ಅಕ್ಕಿ, ಬೆಲ್ಲವನ್ನು ನೀಡಿ ಕಳುಹಿಸುತ್ತಿದ್ದರು. ಮಕ್ಕಳು ಸಹ ಅವುಗಳನ್ನು ಹಿಡಿದುಕೊಂಡು ಗ್ರಾಮದಲ್ಲಿ ಓಡಾಡುತ್ತಿದ್ದರು. ಆದರೆ ಕಳೆದ ಹತ್ತು ದಿನಗಳಿಂದ ಮೂರು ರಾಸುಗಳು ಕಾಣೆಯಾಗಿವೆ. ರಾಸುಗಳು ದೊಡ್ಡದಾದ ಮೇಲೆ ಅವುಗಳನ್ನು ಮಾರಿ ದೇವರಿಗೆ ಆಭರಣ ಖರೀದಿ ಮಾಡುತ್ತಿದ್ದರು.
ಕಾಣೆಯಾದ ರಾಸು ಹುಡುಕಿ ಸುಸ್ತಾದ ಗ್ರಾಮಸ್ಥರು: ಕಳೆದ ಹತ್ತು ದಿನಗಳಿಂದ ಮೂರು ರಾಸುಗಳು ಕಾಣೆಯಾಗಿವೆ. ರಾಸುಗಳು ವಾಪಸ್ ಗ್ರಾಮಕ್ಕೆ ಬಂದಿಲ್ಲ. ಇದರಿಂದ ಅಬ್ಬಲಗೆರೆ ಗ್ರಾಮದಿಂದ ಪ್ರತಿ ದಿನ ಸುತ್ತಮುತ್ತ ಸುಮಾರು 30 ಕಿಮಿ ದೂರದವರೆಗೂ ರಾಸುಗಳ ಹುಡುಕಾಟ ನಡೆಸುತ್ತಿದ್ದಾರೆ. ರಾಸುಗಳು ಕಾಣೆಯಾಗಿರುವುದು ಗ್ರಾಮಸ್ಥರ ದುಃಖಕ್ಕೆ ಕಾರಣವಾಗಿದೆ. ರಾಸುಗಳಲ್ಲಿ ಚೌಡೇಶ್ವರಿಗೆ ಬಿಟ್ಟಿದ್ದ ಹಸು ಗರ್ಭವತಿಯಾಗಿತ್ತು. ಇದು ದನಗಳ್ಳರ ಕೃತ್ಯವೇ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದಾರೆ.
ಇದನ್ನೂ ಓದಿ: ಕಳ್ಳತನದ ಆರೋಪ: ವಾಚ್ಮ್ಯಾನ್ಗೆ ತಲೆಕೆಳಗಾಗಿ ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು