ಶಿವಮೊಗ್ಗ: ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳವಾರ ಶಿವಮೊಗ್ಗ ಪೊಲೀಸರಿಂದ ಪಥಸಂಚಲನ ನಡೆಸಲಾಯಿತು. ನಗರದ ಅಶೋಕ ವೃತ್ತದಿಂದ ಪ್ರಾರಂಭವಾದ ಪಥಸಂಚಲನ ಸೂಕ್ಷ್ಮ ಪ್ರದೇಶಗಳಾದ ಟಿಪ್ಪುನಗರ, ಅಣ್ಣಾ ನಗರ, ತುಂಗಾ ನಗರ ಭಾಗದಲ್ಲಿ ಸಾಗಿತು.
ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಹಾಗೂ ಕೆಎಸ್ಆರ್ಪಿ ಪೊಲೀಸರು ಪಥಸಂಚಲನದಲ್ಲಿ ಭಾಗಿಯಾಗಿದ್ದರು. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಪಥಸಂಚಲನ ನಡೆಸಿದರು. ಇದರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಎಸ್ಪಿ ಲಕ್ಷ್ಮಿ ಪ್ರಸಾದ್ ಸೇರಿದಂತೆ ತುಂಗಾನಗರ ಪಿಐ ಭಾಗವಹಿಸಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ವೋಟಿಗಾಗಿ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ: ಆರಗ ಜ್ಞಾನೇಂದ್ರ
ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಸೋಮವಾರ ಇರಿಸಲಾಗಿದ್ದ ವೀರ ಸಾವರ್ಕರ್ ಫ್ಲೆಕ್ಸ್ ತೆರವು ಮಾಡಿದ ಬೆನ್ನಲ್ಲೇ ಗಲಾಟೆ ನಡೆದಿತ್ತು. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದರ ನಡುವೆಯೂ ಓರ್ವ ಯುವಕನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಈ ಎಲ್ಲಾ ಕಾರಣದಿಂದ ನಗರದಲ್ಲಿ ಇಂದು ಪೊಲೀಸರು ಪಥಸಂಚಲನ ನಡೆಸಿದ್ದಾರೆ.