ಶಿವಮೊಗ್ಗ: ಕೇಂದ್ರ ಸರ್ಕಾರದ ಆರ್ಥಿಕ ಸಚಿವಾಲಯದಿಂದ ಹೊರಡಿಸಲಾದ ಅಧಿಸೂಚನೆ 123 ಅನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ವಾಣಿಜ್ಯ ತೆರಿಗೆ ಕಚೇರಿ ಮುಂದೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಧಿಸೂಚನೆ ಆದೇಶ 123 ರನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ವಾಣಿಜ್ಯ ಉದ್ಯಮಿಗಳಿಗೆ ಮಾರಕವಾಗಲಿದೆ. ವರ್ತಕರು ತಮ್ಮ ಖರೀದಿ ಬಿಲ್ಗಳು ಜಿಎಸ್ಟಿ ಪೊರ್ಟಲ್ 2ಎ ಖಾತೆಯಲ್ಲಿ ಭರಿಸುವ ಬಗ್ಗೆ ಮತ್ತು ಪೋರ್ಟಲ್ನಿಂದ ವರ್ತಕರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ ಎಂದು ದೂರಿದರು.
ಅಧಿಸೂಚನೆ 123 ಅನ್ನು ಜಾರಿಗೆ ತಂದಲ್ಲಿ ಉದ್ಯಮಿಗಳು ಹಾಕಿದ ಬಂಡವಾಳ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ಮುಂದೆ ವ್ಯಾಪಾರ ಮಾಡದಂತಹ ಸ್ಥಿತಿ ಬರಬಹುದು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್ ವಾಸುದೇವ ತಿಳಿಸಿದರು.
123ರ ಪ್ರಕಾರ ತೆರಿಗೆ ಕಟ್ಟುವುದಕ್ಕೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಕೇಂದ್ರದ ಆರ್ಥಿಕ ಇಲಾಖೆಯ ಆದೇಶದ ಪ್ರಕಾರ ದೇಶದ ಆರ್ಥಿಕತೆ ಇನ್ನೂ ಕುಸಿಯುವ ಸಾಧ್ಯತೆ ಇದೆ ಎಂದು ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಮಧುಸೂಧನ್ ಐತಾಳ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಮನವಿಯನ್ನು ಜಂಟಿ ಆಯುಕ್ತರು, ಮಲೆನಾಡು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಮೂಲಕ ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸಿದರು.