ಶಿವಮೊಗ್ಗ: ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ. ಅಮ್ಮ ಸತ್ಯ, ಅಪ್ಪ ನಂಬಿಕೆ. ಅಮ್ಮ ಇಲ್ಲ ಎಂದರೆ ಜಗವೇ ಇಲ್ಲ. ಇಂತಹ ಅಮ್ಮನಿಂದ ದೂರವಿದ್ದ ಜೈಲು ಹಕ್ಕಿಗಳು ಅಮ್ಮನಿಗಾಗಿಯೇ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ಶಿವಮೊಗ್ಗ ಹೊರ ವಲಯದ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ನಿನ್ನೆ (ಶುಕ್ರವಾರ) ವಿಶ್ವ ಅಮ್ಮಂದಿರ ದಿನಾಚರಣೆ ಆಚರಿಸಲಾಯಿತು. ಇದರಲ್ಲಿ 'ನಮ್ಮವರಿಂದ, ನಮ್ಮವರಿಗಾಗಿ, ನಮ್ಮವರಿಗೋಸ್ಕರ' ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ನಡೆಸಲಾಯಿತು.
ಕಾರಾಗೃಹದ ಸಜಾಬಂಧಿಗಳು ಅಮ್ಮಂದಿರ ಕುರಿತು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. 'ಕಂಬಿ ಹಿಂದಿನ ಅಮ್ಮನ ನೆನಪು' ಎಂಬ ಕಾರ್ಯಕ್ರಮದಲ್ಲಿ ಚಲನಚಿತ್ರದ ವಿವಿಧ ಗೀತೆಗಳಿಗೆ ನೃತ್ಯ, ಪೌರಾಣಿಕ ಯಲ್ಲಮ್ಮ ದೇವಿಯ ಕಥೆ, ಪಾರ್ವತಿ - ಗಣೇಶ ರೂಪಕ ನಡೆಸಿಕೊಟ್ಟರು. ಉಡುಪಿಯ ಸಚಿನ್ ಪೂಜಾರಿಯ ಜೋಗಿ ಚಿತ್ರದ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹುಟ್ಟುತ್ತಲೇ ಯಾರು ಹೀಗೆ ಆಗಬೇಕು ಅಂತಾ ಇರಲ್ಲ. ಯಾವುದೋ ಕೆಟ್ಟಗಳಿಗೆ. ಕೋಪದ ಕೈಗೆ ಬುದ್ದಿ ನೀಡಬಾರದು. ಇಲ್ಲಿಗೆ ಬಂದ ಮೇಲೆ ಎಲ್ಲ ವ್ಯವಸ್ಥೆ ತಿಳಿಯುತ್ತದೆ. ಎಲ್ಲರೂ ದೇಶದ ಮಣ್ಣಿನ ಅವಶ್ಯಕ ಕಾನೂನು ತಿಳಿದು ಕೊಂಡಾಗ ಸಮಾಜ, ಮನೆಯಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದರು.
ಕಾರಾಗೃಹದ ಮುಖ್ಯ ಅಧೀಕ್ಷಕರಾದ ಮಹದೇವ ನಾಯಕ್ ಮಾತನಾಡಿ, ನಿಮ್ಮನ್ನು ಮನೆಯ ಮಕ್ಕಳಂತೆ ಕಾಣುತ್ತಿದ್ದಾರೆ. ನಿಮಗೆ ಕಾನೂನಿನ ಸಲಹೆಯನ್ನು ಕಾನೂನು ಸೇವಾ ಪ್ರಾಧಿಕಾರದವರು ನೀಡುತ್ತಾರೆ. ಅಪರಾಧಿಗಳಿಗೂ ಒಂದು ಜೀವನವಿದೆ. ಅದನ್ನು ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಜಾಬಂಧಿಗಳು ಮಾತನಾಡಿ, ತಾವು ಕಾರಾಗೃಹಕ್ಖೆ ಯಾಕೆ ಬರಬೇಕಾಯಿತು?. ಕಾರಾಗೃಹದಲ್ಲಿ ತಮ್ಮನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ?. ಇಲ್ಲಿಗೆ ಬಂದ ಮೇಲೆ ಆದ ಬದಲಾವಣೆಗಳೇನು?, ಕಾರಾಗೃಹದ ಸಿಬ್ಬಂದಿ ನೀಡುವ ಪ್ರೋತ್ಸಾಹವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕಣ್ಣಿನ ಸಮಸ್ಯೆಯಿದ್ದ ಸಜಾಬಂಧಿಗಳಿಗೆ ಕನ್ನಡಕವನ್ನು ವಿತರಿಸಲಾಯಿತು.