ಶಿವಮೊಗ್ಗ: ರಾಜಕಾರಣಿಗಳು ಜನರ ಪ್ರತಿನಿಧಿಗಳೆಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇದಕ್ಕೆ ನಾನೂ ಹೊರತಲ್ಲ. ಉಪಚುನಾವಣೆ ಕಣದಲ್ಲಿ ವೈಯಕ್ತಿಕ ಟೀಕೆ-ಟಿಪ್ಪಣಿಗಳು, ಅಶ್ಲೀಲ ಪದಗಳ ಬಳಕೆಯಿಂದ ನಾನು ಬಹಳ ನೊಂದಿದ್ದೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪಕ್ಷದ ಸಿದ್ಧಾಂತಗಳ ಮೇಲೆ ಟೀಕೆ ಮಾಡಬೇಕು. ಅಭಿವೃದ್ಧಿ ಕಾರ್ಯ, ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳಬೇಕು. ಚುನಾವಣೆ ಇರಲಿ, ಬಿಡಲಿ ರಾಜಕಾರಣದಲ್ಲಿ ಅಶ್ಲೀಲ ಪದ ಬಳಕೆ ನಿಲ್ಲಬೇಕು. ನಾವು ರಾಜ್ಯದ ಜನರ ಮುಂದೆ ದಿನೇ ದಿನೇ ಚಿಕ್ಕವರಾಗುತ್ತಿದ್ದೇವೆ. ನಾನೂ ಸೇರಿದಂತೆ ಎಲ್ಲರೂ ಈ ಬಗ್ಗೆ ನಿಶ್ಚಯ ಮಾಡಬೇಕು ಎಂದು ಎಲ್ಲಾ ರಾಜಕಾರಣಿಗಳಿಗೆ ಮನವಿ ಮಾಡಿದರು.
ಜಿ.ಪಂ ಹಾಗೂ ತಾ.ಪಂ ಚುನಾವಣೆ:
ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಿದೆ. ಕ್ಷೇತ್ರಗಳ ಪುನರ್ ವಿಂಗಡಣೆಗಾಗಿ ಲಕ್ಷ್ಮೀನಾರಾಯಣ್ ಅವರನ್ನು ನೇಮಕ ಮಾಡಲಾಗಿದೆ. ಅವರು ಎಷ್ಟು ಬೇಗ ವಿಂಗಡಣೆ ಮಾಡಿ ಕೊಡುತ್ತಾರೋ, ಅಷ್ಟು ಬೇಗ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗ ಚುನಾವಣೆ ನಡೆಸುತ್ತದೆ ಎಂದರು.
ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು:
ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಟ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಜಾತಿಯನ್ನು ಅಡ್ಡ ತಂದಿದೆ. ಹಣ ಹಂಚುತ್ತಿರುವುದು ಕಾಂಗ್ರೆಸ್. ಆದರೆ, ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಇದರಿಂದಾಗಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದರು.
ತೈಲ ದರ ಏರಿಕೆ ಸಮರ್ಥನೆ:
ಪೆಟ್ರೋಲ್ ದರ ಏರಿಕೆ ನಮ್ಮ ಅವಧಿಯಲ್ಲಿ ಮಾತ್ರ ಹೆಚ್ಚಾಗಿದೆಯೇ, ಹಿಂದೆ ಕಾಂಗ್ರೆಸ್ ಅವಧಿಯಲ್ಲೂ ಹೆಚ್ಚಾಗಿದೆ. ತೈಲ ದರ ಕಡಿಮೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನವಾಗಬೇಕೆಂದರು.