ಶಿವಮೊಗ್ಗ: ನಗರದ ವಿವಿಧೆಡೆ ಸುಮಾರು 15 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶನಿವಾರ ಚಾಲನೆ ನೀಡಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಯುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಕೃಷಿ ನಗರ, ಅಶ್ವಥ್ ನಗರ ಸೇರಿದಂತೆ ವಿವಿಧೆಡೆ ಗುದ್ದಲಿ ಪೂಜೆ ನೆರವೇರಿಸಿದರು.
ನಗರದ ಹೊರ ವಲಯದ ಹರಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಉದ್ಘಾಟಿಸಿದರು. ಶಾಲೆಯಲ್ಲಿ ಮಕ್ಕಳು ತಯಾರಿಸಿದ ವಿವಿಧ ಮಾದರಿಗಳನ್ನು ವೀಕ್ಷಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್ ಕಾರಣ ಇಲ್ಲಿಯವರೆಗೂ ಶಾಲಾ ತರಗತಿಗಳು ಸರಿಯಾಗಿ ನಡೆದಿರಲಿಲ್ಲ. ಇನ್ನು ಮುಂದೆ ಶಾಲೆಗೆ ನಿತ್ಯವೂ ಆಗಮಿಸಿ ಶಿಕ್ಷಣ ಪಡೆಯಬೇಕು. ಶಿಕ್ಷಕರು ಮಾಡುವ ಪಾಠವನ್ನು ಸರಿಯಾದ ಕ್ರಮದಲ್ಲಿ ಕಲಿತು ವಿದ್ಯಾರ್ಜನೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಚಿವರು ಸಲಹೆ ನೀಡಿದರು.
ಈ ವೇಳೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.