ಶಿವಮೊಗ್ಗ: ಪಾದಯಾತ್ರೆ ಮಾಡಿ ಸಾಯಬೇಡ್ರಿ ಅಂತ ಹೇಳ್ತಿವಿ, ಇಲ್ಲ.. ನಾವು ಸಾಯಿತೀವಿ ಅಂತ ಹಠ ಹಿಡಿದ್ರೆ ಏನ್ ಮಾಡೋಣ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿರುದ್ಧ ಗರಂ ಆಗಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಹೆಚ್ಚಾಗುತ್ತಿರುವ ಕಾರಣ ಯಾವುದೇ ಪ್ರತಿಭಟನೆ, ಜನಜಂಗುಳಿ ಸೇರದಂತೆ ನಿರ್ಬಂಧ ಹೇರಲಾಗಿದೆ. ಈ ಮಧ್ಯೆಯೂ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡ್ತೀವಿ ಅಂದ್ರೆ ಏನು ಹೇಳೋದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಬಿಗಿ ಮಾಡಿದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಾತ್ರ ಪಾದಯಾತ್ರೆ ಮಾಡ್ತೀವಿ ಅಂದಿದ್ದಾರೆ. ನೀವು ಅಧಿಕಾರ ನಡೆಸಿದವರು. ಕಾನೂನಿನ ಬಗ್ಗೆ ನಿಮಗೂ ಅರಿವಿದೆ. ನೀವು ಪಾದಯಾತ್ರೆ ಹೋದರೆ ನಿಮ್ಮ ಜೊತೆ ಕಾರ್ಯಕರ್ತರೂ ಬರುತ್ತಾರೆ. ಅದಕ್ಕೆ ದಯಮಾಡಿ ಹೋರಾಟ ಕೈಬಿಡಿ ಎಂದು ಮನವಿ ಮಾಡುವೆ ಎಂದರು.
ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನಸಭೆ ಚುನಾವಣೆ ಬರುತ್ತೆ ಅಂತ ಶೋ ಮಾಡಲು ನಿಮ್ಮೂಂದಿಗೆ ಜನ ಬಂದೇ ಬರ್ತಾರೆ. ನೀವು ಸಾಯೋದ್ಯಾಕೆ? ನಿಮ್ಮವರನ್ನು ಯಾಕೆ ಸಾಯಿಸುತ್ತೀರಿ. ನಾವು-ನೀವು ಒಟ್ಟಿಗೆ ಸಂತೋಷದಿಂದ ಜೀವನ ಮಾಡೋಣ ಅಂತ ಪ್ರಾರ್ಥನೆ ಮಾಡ್ತೀನಿ ಎಂದು ಹೇಳಿದರು.
ಕೇವಲ ಮೇಕೆದಾಟಲ್ಲ, ಕೃಷ್ಣಾ, ಕಾವೇರಿ ಬಗ್ಗೆಯೂ ಹೋರಾಡಲಿ:
ಕಾಂಗ್ರೆಸ್ನವರು ಮೇಕೆದಾಟು ಯೋಜನೆಗಾಗಿ ಮಾತ್ರವಲ್ಲ, ಕಾವೇರಿ ಹಾಗೂ ಕೃಷ್ಣಾ ಬಗ್ಗೆಯೂ ಹೋರಾಟ ಮಾಡಲಿ. ಚುನಾವಣೆ ಬರುವ ತನಕ ಹೋರಾಟ ಮಾಡಲಿ ಯಾರು ಬೇಡ ಅಂತಾರೆ. ಇಷ್ಟು ವರ್ಷ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಯಾಕೆ ಇವೆಲ್ಲಾ ಯೋಜನೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ನೀವು ಹೋರಾಟ ಮಾಡುತ್ತಾ ಪ್ರತಿಪಕ್ಷದಲ್ಲಿಯೇ ಇರಬೇಕು, ನಾವು ಆಡಳಿತ ನಡೆಸುತ್ತಲೇ ಇರಬೇಕು ಎಂದು ಸಚಿವ ಈಶ್ವರಪ್ಪ ಟಾಂಗ್ ನೀಡಿದರು.
ಈಗಾಗಲೇ ಕೇಂದ್ರದಲ್ಲಿ ಅಧಿಕೃತ ಪ್ರತಿಪಕ್ಷ ಇಲ್ಲವಾಗಿದೆ. ರಾಜ್ಯದಲ್ಲಿ ಮುಂದಿನ ಚುನಾವಣೆ ವೇಳೆ ಕಾಂಗ್ರೆಸ್ ಸೋತು ಇಲ್ಲಿಯೂ ಪ್ರತಿಪಕ್ಷದ ಸ್ಥಾನಮಾನ ಕಳೆದುಕೊಳ್ಳುತ್ತದೆ ಎಂದು ಅವರು ವ್ಯಂಗ್ಯವಾಡಿದರು.
ಇದನ್ನೂ ಓದಿ: ಎರಡೂವರೆ ವರ್ಷದಲ್ಲಿ ಬಿಜೆಪಿ ಏನು ಕಡಿದು ಕಟ್ಟೆ ಹಾಕಿದೆ ಎಂಬುದರ ಲೆಕ್ಕ ಕೊಡಲಿ : ಸಿದ್ದರಾಮಯ್ಯ