ಶಿವಮೊಗ್ಗ: ತೀವ್ರ ಕುತೂಹಲ ಕೆರಳಿಸಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ, ಮೊದಲ ನಾಮಪತ್ರ ಸಲ್ಲಿಕೆಯಾಗಿದೆ. ಜಿಲ್ಲಾಧಿಕಾರಿ ಅನುರಾಧ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಯಮುನಾ ರಂಗೇಗೌಡ ಇವತ್ತು ನಾಮಪತ್ರ ಸಲ್ಲಿಸಿದ್ದಾರೆ.
ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ, ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್, ಪ್ರಮುಖರಾದ ರಂಗನಾಥ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು. ಮೇಯರ್ ಸ್ಥಾನ ಬಿಸಿಎಂ (ಬಿ) ಮಹಿಳೆಗೆ ಮೀಸಲಾಗಿದೆ. ಪಾಲಿಕೆಯಲ್ಲಿ ಬಿಜೆಪಿ ಬಹುಮತ ಇದೆ. ಆದರೆ ಮೇಯರ್ ಸ್ಥಾನದ ಸ್ಪರ್ಧಿಗಳ ಜಾತಿ ಪ್ರಮಾಣ ಪತ್ರದ ವಿಚಾರಕ್ಕೆ ಎದುರಾಗಿರುವ ಗೊಂದಲದ ಹಿನ್ನೆಲೆ, ಕಾಂಗ್ರೆಸ್ ಅಭ್ಯರ್ಥಿ ಯಮುನಾ ರಂಗೇಗೌಡ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಪಕ್ಷದಿಂದ ಮೇಯರ್ ಆಕಾಂಕ್ಷಿ ಆಗಿದ್ದ ಸುವರ್ಣ ಶಂಕರ್ ಅವರ ಜಾತಿ ಪ್ರಮಾಣಪತ್ರವನ್ನು, ಉಪ ವಿಭಾಗಾಧಿಕಾರಿ ತಿರಸ್ಕರಿಸಿದ್ದಾರೆ. ಮತ್ತೊಬ್ಬ ಆಕಾಂಕ್ಷಿ ಅನಿತಾ ರವಿಶಂಕರ್ ಅವರ ಜಾತಿ ಪ್ರಮಾಣ ಪತ್ರ ಸಂಬಂಧ, ದೂರು ದಾಖಲಾಗಿದೆ. ಉಪ ವಿಭಾಗಾಧಿಕಾರಿ ಅವರು ವಿಚಾರಣೆ ನಡೆಸಿದ್ದು, ಜ.28ಕ್ಕೆ ತೀರ್ಪು ಕಾಯ್ದಿರಿಸಿದ್ದಾರೆ. ಇದು ಬಿಜೆಪಿ ಪಾಳಯದಲ್ಲಿ ಭಯ ಹುಟ್ಟಿಸಿದೆ.