ಶಿವಮೊಗ್ಗ : ಅವರಿಬ್ಬರು ಬರೋಬ್ಬರಿ 17 ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದರು. ಆದರೆ, ಕ್ಷುಲ್ಲಕ ಕಾರಣಕ್ಕೆ ಬೇರೆಯಾಗಿದ್ದ ದಂಪತಿಯನ್ನು ಅವರ ಮಗನೇ 'ಲೋಕ ಅದಾಲತ್'ನಲ್ಲಿ ಒಂದು ಮಾಡಿರುವ ಘಟನೆ ಹೊಸನಗರದಲ್ಲಿ ನಡೆದಿದೆ.
ನಿನ್ನೆ(ಶನಿವಾರ) ಹೊಸನಗರದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಲೋಕ ಅದಾಲತ್ ನಡೆಸಲಾಯಿತು. ಇಲ್ಲಿ ಹೊಸನಗರ ತಾಲೂಕಿನ ಕಡೆಗದ್ದೆಯ ಗಣೇಶ ಮೂರ್ತಿ ಹಾಗೂ ಪೂರ್ಣಿಮ ದಂಪತಿ ಮತ್ತೆ ಒಂದಾಗಿದ್ದಾರೆ. ಅಂದ ಹಾಗೆ ಇವರನ್ನು ಒಂದು ಮಾಡಿದ್ದು, ಈ ದಂಪತಿಯ ಪುತ್ರ 'ಸುಹಾಸ್.ಜಿ ಕಶ್ಯಪ್'.
ಕಳೆದ ಮೂರು ವರ್ಷಗಳ ಹಿಂದೆ ಪೂರ್ಣಿಮಾ ಶಿವಮೊಗ್ಗದ ತನ್ನ ತವರು ಮನೆಗೆ ಹೋಗಿದ್ದ ವೇಳೆ, ದಂಪತಿಯ ನಡುವೆ ಮನಸ್ತಾಪ ಉಂಟಾಗಿದೆ. ನಂತರ ಅದು ದೊಡ್ಡ ಗ್ಯಾಪ್ ಉಂಟಾಗಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು.
ಆದರೆ, ಇವರ ಮಗ ಸುಹಾಸ್ ಕಶ್ಯಪ್ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಷ್ಟು ದಿನ ತನ್ನ ತಂದೆಯ ಜತೆಗಿದ್ದ. ಅಲ್ಲದೇ ಆತ ತಾಯಿ ಇದ್ದರೂ ಸಹ ತಾನು ಅನಾಥನಾಗಿದ್ದೇನೆ ಎಂದು ತಮ್ಮ ವಕೀಲರಾದ ವಾಲೆಮನೆ ಶಿವಕುಮಾರ್ ಅವರಿಗೆ ತಿಳಿಸಿದ್ದಾನೆ.
ವಕೀಲರು ನ್ಯಾಯಾಧೀಶರೊಂದಿಗೆ ಚರ್ಚಿಸಿ ದಂಪತಿಯನ್ನು ಒಂದು ಮಾಡಲು ನಿರ್ಧರಿಸಿದ್ದಾರೆ. ಇದಕ್ಕೆ ನ್ಯಾಯಾಲಯ ದಂಪತಿಯನ್ನು ಕರೆಯಿಸಿ, ಮಗನಿಗಾಗಿ ಒಂದಾಗುವಂತೆ ಕೇಳಿಕೊಂಡಿದೆ. ಮಗನಿಂದ ದಂಪತಿ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡು ಹೊಸನಗರದಲ್ಲಿ ನಡೆದ 'ರಾಷ್ಟ್ರೀಯ ಲೋಕ ಅದಾಲತ್'ನಲ್ಲಿ ಒಂದಾಗಿದ್ದಾರೆ.
ಹೊಸನಗರದ ಜೆಎಂಎಫ್ಸಿ ಹಿರಿಯ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಲತಾ ಹಾಗೂ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ರವಿಕುಮಾರ್ ಅವರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ದಂಪತಿ ಒಂದಾಗಿದ್ದಾರೆ.
ಏನಿದು ಲೋಕ ಅದಾಲತ್? : ಲೋಕ ಅದಾಲತ್ ಎಂದರೆ 'ಜನತೆಯ ನ್ಯಾಯಾಲಯ'. ಹಿಂದೆ ಗ್ರಾಮಗಳಲ್ಲಿ ಹಿರಿಯರು ವ್ಯಾಜ್ಯ ಇತ್ಯರ್ಥಪಡಿಸುತ್ತಿದ್ದ ಪ್ರತಿರೂಪವೇ ಇದು. ಅದಾಲತ್ ಪ್ರಕ್ರಿಯೆ ಅತಿ ಸರಳ. ಇಲ್ಲಿ ವ್ಯಾಜ್ಯ ಏನೇ ಇದ್ದರೂ ರಾಜಿಗೆ ಮೊದಲ ಆದ್ಯತೆ. ನ್ಯಾಯಾಧೀಶರು ಮತ್ತು ನುರಿತ ವಕೀಲರು ಲೋಕ ಅದಾಲತ್ ಪೀಠದಲ್ಲಿ ಕುಳಿತು ವಾದಿ-ಪ್ರತಿವಾದಿಗಳನ್ನು ಕೂರಿಸಿಕೊಂಡು ಅವರ ಮನವೊಲಿಸಿ ವ್ಯಾಜ್ಯಕ್ಕೆ ಅವರ ಸಮಕ್ಷಮದಲ್ಲೇ ಪರಿಹಾರ ಕಂಡುಕೊಳ್ಳುತ್ತಾರೆ.
ಇದನ್ನೂ ಓದಿ: ದೇವಭೂಮಿ ಉತ್ತರಾಖಂಡ್ಗೆ ಮೊದಲ ಮಹಿಳಾ ಸಿಎಂ.. 'ರಿತು ಖಂಡೂರಿ'ಗೆ ಬಿಜೆಪಿ ಹೈಕಮಾಂಡ್ ಮಣೆ?