ಶಿವಮೊಗ್ಗ: ಸಾಗರದ ರೈಲ್ವೆ ನಿಲ್ದಾಣದ ಪಕ್ಕದಲ್ಲಿ ಭಗವತಿ ಅಮ್ಮನ ಪುಟ್ಟ ಗುಡಿ ಇದೆ. ಈ ದೇವಾಲಯವನ್ನು ನಿರ್ಮಿಸಿದ್ದು ಓರ್ವ ಮುಸ್ಲಿಂ ವ್ಯಕ್ತಿ ಅಂತ ಹೇಳಿದ್ರೆ ಆಶ್ಚರ್ಯವಾಗಬಹುದು. ಹೌದು, ಈ ಭಗವತಿ ಅಮ್ಮನ ದೇವಾಲಯವನ್ನು ಸಾಗರದ ರೈಲ್ವೆ ಇಲಾಖೆಯಲ್ಲಿ ನೌಕರನಾಗಿದ್ದ ಇಬ್ರಾಹಿಂ ಶರೀಫ್ ಎಂಬುವರು ನಿರ್ಮಿಸಿದ್ದಾರೆ.
ಸ್ವತಃ ಇಬ್ರಾಹಿಂ ಶರೀಫ್ ಅವರೇ ದೇವಿಯ ಆರಾಧಕರಾಗಿದ್ದರು. ಕಳೆದ 50 ವರ್ಷಗಳ ಹಿಂದೆ ಇಬ್ರಾಹಿಂ ಶರೀಫರು ದೇವಿಯ ಆರಾಧನೆ ಪ್ರಾರಂಭಿಸಿದರು. ನಂತರ ದೇವಾಲಯವನ್ನು ನಿರ್ಮಿಸಿ ಪೂಜಿಸಲು ಶುರು ಮಾಡಿದರು. ಇಬ್ರಾಹಿಂ ಶರೀಫರು ಮುಸ್ಲಿಂರಾಗಿದ್ದರೂ ಸಹ ದೇವಿಯ ಪೂಜೆ, ಪ್ರಾರ್ಥನೆ ಮಾಡಿದ್ರು. ತನ್ನ ರೈಲ್ವೆ ಇಲಾಖೆಯ ಕಾಯಕದ ಜೊತೆ ಇದನ್ನು ಸಹ ಮುಂದುವರಿಸಿಕೊಂಡು ಹೋದರು. ಇಬ್ರಾಹಿಂ ಶರೀಫರ ಜೊತೆ ಅವರ ಕುಟುಂಬವು ಸಹ ದೇವಿಯನ್ನು ಆರಾಧಿಸುತ್ತಾರೆ.
ಇಬ್ರಾಹಿಂರ ಮೇಲೆ ದೇವಿ ಅವಾಹನೆ:
ಶರೀಫರ ಮೇಲೆ ಭಗವತಿ ಅಮ್ಮ ಆವಾಹನೆಯಾಗುತ್ತಿತ್ತು. ಭಕ್ತರಿಗೆ ಅಮಾವಾಸ್ಯೆ ಹಾಗು ಹುಣ್ಣಿಮೆಯಂದು ದರ್ಶನ ನೀಡುತ್ತಿತ್ತು. ಇಲ್ಲಿಗೆ ರಾಜ್ಯದ ಎಲ್ಲ ಕಡೆಯಿಂದಲೂ ಭಕ್ತರು ಆಗಮಿಸುತ್ತಿದ್ದರು. ಭಕ್ತರು ತಗೆ ಕಷ್ಟ ಎಂದು ದೇವಿಯಲ್ಲಿ ಹೇಳಿಕೊಂಡು ಮನೆಗೆ ಹೋಗುವಷ್ಟರಲ್ಲಿ ಅವರ ಕಷ್ಟ ಪರಿಹಾರವಾಗಿರುತ್ತಿತ್ತಂತೆ. ಹೀಗೆ ದೇವಿಯ ಮೇಲೆ ಭಕ್ತರು ಅಪಾರ ನಂಬಿಕೆ ಇರಿಸಿದ್ದಾರೆ.
ದೇವಿ ದೇವಾಲಯ ಸ್ಥಾಪನೆ:
ಇಬ್ರಾಹಿಂ ಶರೀಫರ ಕನಸಿನಲ್ಲಿ ಭಗವತಿ ದೇವಿಯು ಬರುತ್ತಿದ್ದಳು. ಕನಸಿನಲ್ಲಿ ದೇವಿ ಬಂದು ತನಗೊಂದು ನೆಲೆ ಬೇಕು ಅಂತ ಕೇಳಿದ್ದಾಳಂತೆ. ಅದರಂತೆ ಇಬ್ರಾಹಿಂ ಶರೀಫರು ದೇವಾಲಯ ಕಟ್ಟಲು ಹೋದಾಗ ಇದು ರೈಲ್ವೆ ಜಾಗ ಎಂದು ದೇವಾಲಯ ಕಟ್ಟಲು ಇಲಾಖೆಯ ಅಧಿಕಾರಿಗಳು ಬಿಡಲಿಲ್ಲ. ಯಾರು ದೇವಿಯ ದೇವಾಲಯ ಕಟ್ಟಲು ಅಡ್ಡಿಪಡಿಸಿದರೋ ಅವರಿಗೆ ಅನಾರೋಗ್ಯ ಉಂಟಾಯಿತಂತೆ. ಇದರಿಂದ ಮೈಸೂರಿನ ಆಸ್ಪತ್ರೆಯಿಂದ ಬಂದ ಅಧಿಕಾರಿಗಳು ದೇವಿಯ ದೇವಾಲಯ ನಿರ್ಮಾಣಕ್ಕೆ ಜಾಗವನ್ನು ಕಲ್ಪಿಸಿದರು. ಹಾಗೂ ತಾವು ಸಹ ದೇವಾಲಯ ನಿರ್ಮಾಣಕ್ಕೆ ಹಣವನ್ನು ನೀಡಿದರಂತೆ.
ಜಂಬಗಾರು ರೈಲು ನಿಲ್ದಾಣದ ಹಿಂಭಾಗದಲ್ಲಿ ಗುಡಿ:
ಇದರಿಂದಾಗಿ ಸಾಗರದ ಜಂಬಗಾರು ರೈಲು ನಿಲ್ದಾಣದ ಹಿಂಭಾಗದಲ್ಲಿ ಭಗವತಿ ದೇವಿಯು ನೆಲೆಸಿದ್ದಾಳೆ. ದೇವಾಲಯ ನಿರ್ಮಾಣವಾಗಿ 50 ವರ್ಷವೇ ಸಂದಿವೆ. ಗುಡಿ ನಿರ್ಮಾಣದ ನಂತರ ಇಬ್ರಾಹಿಂ ಶರೀಫರೇ ದೇವಿಗೆ ಪೂಜೆ ಮಾಡುತ್ತಿದ್ದರು. ದೇವಾಲಯಕ್ಕೆ ಬಂದ ಭಕ್ತರಿಗೆ ದೇವಿಯ ಮಹಿಮೆಯನ್ನು ತಿಳಿಸುತ್ತಿದ್ದರು.
ದೇವಿ ಆರಾಧನೆ ಜೊತೆಗೆ ಮುಸ್ಲಿಂ ಸಮಾಜದ ಆಚರಣೆ:
ಹುಣ್ಣಿಮೆ ಹಾಗೂ ಅಮಾವಾಸ್ಯೆಯಂದು ದೇವಿಯ ದರ್ಶನ ನಡೆಯುತ್ತಿತ್ತು. ದೇವಿಯ ದರ್ಶನ ಪಡೆದರೆ ತಮ್ಮ ಕಷ್ಟ ಪರಿಹಾರ ಆಗುತ್ತದೆ ಎಂದು ತಿಳಿದ ಭಕ್ತರು ಅನೇಕ ಕಡೆಗಳಿಂದ ಬರಲು ಪ್ರಾರಂಭಿಸಿದರು. ಹೀಗೆ ಬಂದ ಭಕ್ತರಿಗೆ ನಿರಾಸೆ ಮಾಡದೆ ಇಬ್ರಾಹಿಂ ಕುಟುಂಬ ಅವರಿಗೆ ಸಹಕಾರ ನೀಡುತ್ತಿತ್ತು. ಶರೀಫರು ದೇವಿಯ ಆರಾಧನೆ ಜೊತೆಗೆ ಮುಸ್ಲಿಂ ಸಮಾಜದ ಆಚರಣೆಯನ್ನು ಪಾಲಿಸುತ್ತಿದ್ದರು.
ಇಬ್ರಾಹಿಂ ಶರೀಫರ ನಿಧನದ ನಂತರ ದೇವಾಲಯ ಹಸ್ತಾಂತರ:
ಇಬ್ರಾಹಿಂ ಶರೀಫರು ವಯೋಸಹಜವಾಗಿ ಸಾವಿಗೀಡಾಗುತ್ತಾರೆ. ನಂತರ ಅವರ ಪತ್ನಿ, ಮಗ ಹಾಗೂ ಮಗಳು ದೇವಾಲಯವನ್ನು ದೇವಾಲಯ ಸಮಿತಿಗೆ ವಹಿಸಿಕೊಡುತ್ತಾರೆ. ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ದೇವಾಲಯವನ್ನು ಹಸ್ತಾಂತರ ಮಾಡುತ್ತಾರೆ. ಕಳೆದ ಎರಡು ವರ್ಷಗಳಿಂದ ಟ್ರಸ್ಟ್ ರಚನೆ ಮಾಡಿಕೊಂಡು ದೇವಾಲಯ ನಡೆಸಿಕೊಂಡು ಬರುತ್ತಿದ್ದಾರೆ. ಇಂದಿಗೂ ದೇವಾಲಯದಲ್ಲಿ ಪ್ರತಿ ಹಬ್ಬದಲ್ಲಿ ಇಬ್ರಾಹಿಂ ಶರೀಫರ ಕುಟುಂಬವೇ ಪ್ರಥಮ ಪೂಜೆ ಸಲ್ಲಿಸುವುದು ವಿಶೇಷ.
ಭಕ್ತರ ಆಗಮನ:
ದೇವಿ ದರ್ಶನಕ್ಕೆ ಕೇವಲ ಹಿಂದೂಗಳಲ್ಲದೇ ಮುಸ್ಲಿಂ ಭಕ್ತರು ಆಗಮಿಸುತ್ತಾರೆ. ಸಾಗರದ ಶಾಹೀನ ಎಂಬುವವರು ದೇವಾಲಯಕ್ಕೆ ಕಳೆದ ಒಂದು ವರ್ಷದಿಂದ ಬರುತ್ತಿದ್ದಾರೆ. ಇವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದೇವಿಯೇ ಕರೆದಂತೆ ಆಗಿ, ದೇವಾಲಯಕ್ಕೆ ಬರುತ್ತಿದ್ದಾರೆ. ಹೀಗೆ ಭಕ್ತರು ದೇವಿಯ ದರ್ಶನಕ್ಕೆ ತಂಡೋಪತಂಡವಾಗಿ ಆಗಮಿಸುತ್ತಾರೆ. ತಮ್ಮ ಕಷ್ಟವನ್ನು ಹೇಳಿಕೊಳ್ಳಲಷ್ಟೇ ಅಲ್ಲ, ಹರಕೆ ತೀರಿಸಲು ಸಹ ಆಗಮಿಸುತ್ತಾರೆ.
ಇದನ್ನೂ ಓದಿ: ಸವಾರಿ ತೊಟ್ಟಿಯಲ್ಲಿ ಯದುವೀರ್ರಿಂದ ಸಾಂಪ್ರದಾಯಿಕ ಆಯುಧ ಪೂಜೆ