ಶಿವಮೊಗ್ಗ: ಶಾಲಾ-ಕಾಲೇಜುಗಳಲ್ಲಿ ಕಡ್ಡಾಯ ಸಮವಸ್ತ್ರ ಪಾಲನೆಯಾಗಬೇಕೆಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಹಿಂದೂ ಜಾಗರಣ ವೇದಿಕೆಯು ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಸಲ್ಲಿಸಿದೆ.
ಸರ್ಕಾರಿ ಶಾಲೆಗಳು ವಿದ್ಯೆ ನೀಡುವ ಕೇಂದ್ರಗಳಾಗಿವೆ. ಇಲ್ಲಿ ಎಲ್ಲರೂ ಸಮಾನತೆಯಿಂದ ಇರಬೇಕೆಂದು ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ. ಮೊದಲು ಭಾರತೀಯ ಸಂಸ್ಕೃತಿಯ ವಿದ್ಯಾ ದೇವತೆ ಸರಸ್ವತಿ ಪೂಜೆಯನ್ನು ಜಾತ್ಯಾತೀತ ಹೆಸರಿನಲ್ಲಿ ನಿಲ್ಲಿಸಲಾಗಿದೆ.
ಇದು ಸಮಾಜದ ಅಸಮಾಧಾನಕ್ಕೆ ಕಾರಣವಾಗಿದೆ. ಈಗ ಶಾಲೆಯಲ್ಲಿ ಮಕ್ಕಳಿಗೆ ಮತಾಧಾರಿತ ತಾರತಮ್ಯ ಮೂಡುವಂತಹ ಉಡುಗೆ-ತೊಡುಗೆಗಳಿಗೆ ಅವಕಾಶ ನೀಡಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಹಿಂದು ಜಾಗರಣ ವೇದಿಕೆ ಸದಸ್ಯರು ಆರೋಪಿಸಿದರು.
ಇದನ್ನೂ ಓದಿ: ಹಿಜಾಬ್, ಶಾಲು ಹಾಕೊಂಡ್ ಬಂದ್ರೆ ನೋ ಎಂಟ್ರಿ.. ಕೋರ್ಟ್ ತೀರ್ಪು ಬರೋವರೆಗೂ ಸಮವಸ್ತ್ರ ಧರಿಸಿಯೇ ಬರಬೇಕು: ಶಿಕ್ಷಣ ಸಚಿವ
ಭಾರತೀಯ ಸಂವಿಧಾನ ನೀಡಿರುವ ಧಾರ್ಮಿಕ ಹಕ್ಕನ್ನು ದುರುಪಯೋಗ ಮಾಡಿಕೊಂಡು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮತೀಯ ಪ್ರತ್ಯೇಕತೆಯನ್ನು ಎತ್ತಿ ಹಿಡಿಯುವ ಪ್ರಯತ್ನದ ಹಿಂದೆ ಮತಾಂಧ ಜಿಹಾದಿ ಮಾನಸಿಕತೆಯ ಶಕ್ತಿಗಳಿರುವುದು ಕಾಣಿಸುತ್ತಿದೆ ಎಂದು ಆಪಾದಿಸಿರುವ ಹಿಂಜಾವೇ,ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಬಂದಿದಕ್ಕೆ, ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುವುದರಿಂದ ಶೈಕ್ಷಣಿಕ ವಾತಾವರಣ ಹಾಳು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಮಾಜದ ಶಾಂತಿಯ ಕಳಕಳಿಯುಳ್ಳ ಸರ್ಕಾರ ಇಂತಹ ಗೊಂದಲಕಾರಿ ಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಆಶಿಸಿದ್ದೇವೆ. ಒಂದು ವೇಳೆ ಹಾಗೇನಾದರೂ ಅವಕಾಶ ನೀಡಿದ್ದೇ ಆದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ ವೇದಿಕೆಯು ಅದರ ವಿರುದ್ದ ಉಗ್ರ ಹೋರಾಟ ಕೈಗೊಳ್ಳವುದಾಗಿ ಎಚ್ಚರಿಕೆ ನೀಡಿದರು.