ಶಿವಮೊಗ್ಗ: ರಾಜ್ಯದಲ್ಲಿ ಮಲೆನಾಡು ನಗರಿ ಎಂದೇ ಖ್ಯಾತವಾಗಿರುವ ಶಿವಮೊಗ್ಗದಲ್ಲಿ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೂರ್ಯನ ತಾಪಕ್ಕೆ ನಗರ ತತ್ತರಿಸಿ ಹೋಗಿದ್ದು, ನೆಲ ಕಾದ ಕಾವಲಿಯಂತಾಗಿದೆ. ಉಷ್ಣಾಂಶದಲ್ಲಿನ ದಿಢೀರ್ ಏರಿಕೆಯಿಂದ ಮಲೆನಾಡಿನ ಜನತೆ ಏದುಸಿರು ಬಿಡುವತಾಂಗಿದೆ.
ಸೂರ್ಯ ಉಗುಳುತ್ತಿರುವ ಕೆಂಡದಂತಹ ಬಿಸಿಲಿಗೆ ಶಿವಮೊಗ್ಗ ಬಸವಳಿದು ಹೋಗಿದೆ. ಕಳೆದೊಂದು ವಾರದಿಂದ ನಗರದ ಗರಿಷ್ಠ ತಾಪಮಾನದ ಪ್ರಮಾಣ 35ಕ್ಕೆ ತಲುಪಿದೆ. ದಿನದಿಂದ ದಿನಕ್ಕೆ ಬಿಸಿಲ ಬೇಗೆ ಏರು ಗತಿಯಲ್ಲಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಉಷ್ಣಾಂಶದ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಕಳೆದ ಒಂದೆರಡು ದಶಕಗಳಿಂದ ಶಿವಮೊಗ್ಗ ನಗರದ ಸುತ್ತಮುತ್ತಲೂ ಇದ್ದ ಸಾಕಷ್ಟು ಅರಣ್ಯ ಪ್ರದೇಶ, ತೋಟ, ಗದ್ದೆಗಳು ಮರೆಯಾಗುತ್ತಿವೆ. ನಾನಾ ಕಾರಣಗಳಿಂದ ಮರ ಕಡಿಯುತ್ತಲೇ ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ತಾಪಮಾನದ ಪ್ರಮಾಣ ಹೆಚ್ಚಾಗುತ್ತಿದೆ.
ಇನ್ನು ದೇಹವನ್ನ ತಂಪು ಮಾಡಲು ಜನರು ಏಳನೀರು, ಮಜ್ಜಿಗೆ, ತಂಪು ಪಾನೀಯ ಸೇರಿದಂತೆ ಕಲ್ಲಂಗಡಿ, ಕರ್ಬೂಜ, ಕಬ್ಬಿನ ಹಾಲು, ಹಣ್ಣಿನ ಜ್ಯೂಸ್ಗಳ ಮೊರೆ ಹೋಗುತ್ತಿದ್ದು, ಅವುಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು. ಅಷ್ಟೇ ಅಲ್ಲದೆ ಈ ಸೀಜನ್ನಲ್ಲಿ ಬಡವರ ಫ್ರಿಡ್ಜ್ ಎಂದು ಕರೆಯುವ ಮಡಿಕೆ ವ್ಯಾಪಾರವು ಕೂಡ ಹೆಚ್ಚಾಗಿದೆ.