ಶಿವಮೊಗ್ಗ: ಉತ್ತರ ಕರ್ನಾಟಕ ಭಾಗದಲ್ಲಿ ಕಂಡುಬರುವ ಫ್ಲೋರೈಡ್ ನೀರು ಮಲೆನಾಡಿನಲ್ಲೂ ಕಂಡು ಬಂದಿದೆ. ಶಿವಮೊಗ್ಗ ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಗೆಜ್ಜೆನಹಳ್ಳಿ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಫ್ಲೋರೈಡ್ ನೀರಿನ ಸಮಸ್ಯೆ ತಲೆದೋರಿದೆ.
ಫ್ಲೋರೈಡ್ ನೀರಿನ ಬಳಕೆಯಿಂದ ಮನೆಯ ಪಾತ್ರೆಗಳ ಜೊತೆ ಜನರ ಜೀವನವು ಹಾಳಾಗುತ್ತಿದೆ. ಈ ನೀರನ್ನು ಒಂದು ದಿನ ಮನೆಯಲ್ಲಿ ಸಂಗ್ರಹ ಮಾಡಿಟ್ಟುಕೊಂಡ್ರೆ ನೀರಿನ ಕರಾಳ ಮುಖ ತಿಳಿಯುತ್ತದೆ. ಒಂದು ರೀತಿ ಸುಣ್ಣದ ಪುಡಿಯಂತೆ ನೀರಿನ ಮೇಲೆ ಬಿಳಿಬಿಳಿಯಾದ ವಸ್ತುಗಳು ತೇಲಲು ಪ್ರಾರಂಭವಾಗುತ್ತವೆ. ಅಲ್ಲದೇ, ನೀರು ಸಂಗ್ರಹವಾಗುವ ಎಲ್ಲೆಡೆ ಕೆಳಗಡೆ ಬಿಳಿಯ ಪಾದರ್ಥದ ರೀತಿ ಕುಳಿತುಕೊಳ್ಳುತ್ತದೆ. ಇದರಿಂದ ಜನ ಬೇಸತ್ತು ಹೋಗಿದ್ದಾರೆ.
ಹೊಸ ಕೊಳವೆ ಬಾವಿಯಿಂದ ಸಮಸ್ಯೆ ಸೃಷ್ಟಿ: ಹತ್ತಾರು ವರ್ಷಗಳಿಂದ ಗೆಜ್ಜೆನಹಳ್ಳಿ ಗ್ರಾಮದ ದೇವಾಲಯದ ಬಳಿ ಒಂದು ಕೊಳವೆ ಬಾವಿ ಇತ್ತು. ಇಲ್ಲಿಂದ ಗ್ರಾಮಕ್ಕೆ ಸಿಹಿ ನೀರು ಲಭ್ಯವಾಗುತ್ತಿತ್ತು. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ದೇವಾಲಯದ ಬಳಿಯ ಕೊಳವೆ ಬಾವಿ ಹಾಳಾಗಿದ್ದು, ಇದರಿಂದ ನೀರಿನ ಸಮಸ್ಯೆ ಉಂಟಾಗಿತ್ತು. ಗೆಜ್ಜೆನಹಳ್ಳಿ ಗ್ರಾಮವು ಕೋಟೆಗಂಗೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತದೆ.
ಗ್ರಾಮ ಪಂಚಾಯತ್ನವರು ಜಿಲ್ಲಾ ಪಂಚಾಯತ್ಗೆ ನೀರಿನ ಸಮಸ್ಯೆ ಬಗ್ಗೆ ತಿಳಿಸಿದಾಗ ಜಿಲ್ಲಾ ಪಂಚಾಯತ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವತಿಯಿಂದ ಗೆಜ್ಜೆನಹಳ್ಳಿ ಗ್ರಾಮದಿಂದ 3 ಕೀ.ಮಿ ದೂರದ ಬೆಟ್ಟದ ಸಮೀಪ ಪಾಯಿಂಟ್ ಮಾಡಿಸಿ, ಅಲ್ಲಿ ಕೊಳವೆ ಬಾವಿ ಕೊರೆಯಿಸಿ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಹೊಸ ಕೊಳವೆಬಾವಿಯಿಂದ ಸರಬರಾಜಾಗುತ್ತಿರುವ ನೀರು ಸಂಪೂರ್ಣ ಫ್ಲೋರೈಡ್ನಿಂದ ಕೊಡಿದೆ. ಇದನ್ನು ಬಳಸುತ್ತಿರುವ ಜನ ಈಗಾಗಲೇ ಕೈ, ಕಾಲು ನೋವು ಎನ್ನುತ್ತಿದ್ದಾರೆ. ಹಲವು ರೋಗಗಳು ಸಹ ನಮಗೆ ಕಾಣಿಸಿಕೊಂಡಿವೆ, ಸ್ನಾನ ಮಾಡಿದ್ರೆ ಮೈ ಕಡಿತ ಪ್ರಾರಂಭವಾಗುತ್ತದೆ. ಮಕ್ಕಳಿಗೂ ಸಹ ಸಮಸ್ಯೆಗಳು ಕಂಡುಬರುತ್ತಿವೆ ಎನ್ನುತ್ತಾರೆ ಗ್ರಾಮಸ್ಥರು.
ದೂರು ನೀಡಿದ್ರು ಪ್ರಯೋಜನವಾಗಿಲ್ಲ: ತಮ್ಮ ಗ್ರಾಮದಲ್ಲಿ ಫ್ಲೋರೈಡ್ ನೀರು ಸರಬರಾಜಾಗುತ್ತಿದೆ ಎಂದು ಗ್ರಾಮ ಪಂಚಾಯತಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ಈ ನೀರನ್ನು ಹಲವು ಬಾರಿ ಪರೀಕ್ಷೆಗೆ ಒಳಪಡಿಸಿದ್ರೂ ಸಹ ಶುದ್ಧ ನೀರು ಸಿಗುತ್ತಿಲ್ಲ. ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಇದೆ. ಅದನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳಲಾಗುತ್ತದೆ. ಕೆಲವೊಮ್ಮೆ ವಿದ್ಯುತ್ ಇಲ್ಲದೆ ಹೋದಾಗ ಅನಿವಾರ್ಯವಾಗಿ ಫ್ಲೋರೈಡ್ ನೀರನ್ನೇ ಕುಡಿಯಬೇಕಾಗುತ್ತದೆ ಎಂಬುದು ಗ್ರಾಮಸ್ಥರ ಅಳಲು.
ನಮ್ಮ ಗ್ರಾಮಕ್ಕೂ ತುಂಗಾ ನೀರು ನೀಡಿ: ಶಿವಮೊಗ್ಗ ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಗೆಜ್ಜೆನಹಳ್ಳಿ ಗ್ರಾಮ ಕೂಡ ಬೆಳೆಯುತ್ತಿದೆ. ಇಲ್ಲಿ ಸಹ ಹೊಸ ಹೊಸ ಬಡಾವಣೆಗಳು ಪ್ರಾರಂಭವಾಗಿವೆ. ಇದರಿಂದ ನಮಗೂ ತುಂಗಾ ನದಿಯ ನೀರು ನೀಡಲು ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಎರಡು ಒಮಿಕ್ರಾನ್ ಉಪತಳಿ ಪತ್ತೆ!